

ಬೆಂಗಳೂರು: ‘ಬಿಗ್ ಬಾಸ್’ ಸೀಸನ್ 8ರ ಸ್ಪರ್ಧಿ ಧನುಶ್ರೀ ಇದೀಗ ‘ಒಂದೊಳ್ಳೆ ಲವ್ಸ್ಟೋರಿ’ಯ ಹಿಂದೆ ಬಿದ್ದಿದ್ದಾರೆ. ಅಂದರೆ, ಆ ಶೀರ್ಷಿಕೆಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರ ಮೊದಲ ಚಿತ್ರಕ್ಕೆ ನಟ ಪುನೀತ್ ರಾಜಕುಮಾರ್ ಸಹ ಸಾಥ್ ನೀಡಿದ್ದು ವಿಶೇಷ. ಪ್ರವೀಣ್ ಸುತಾರ್ ನಿರ್ದೇಶನದ ‘ಒಂದೊಳ್ಳೆ ಲವ್ಸ್ಟೋರಿ’ ಸಿನಿಮಾ ಬಹುತೇಕ ಶೂಟಿಂಗ್ ಮುಗಿಸಿ ಚಿತ್ರೀಕರಣೋತ್ತರ ಕೆಲಸದಲ್ಲಿ ನಿರತವಾಗಿದೆ. ಈ ನಡುವೆ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನೆರವೇರಿದೆ. ಪುನೀತ್ ರಾಜಕುಮಾರ್ ಆಗಮಿಸಿ ಪೋಸ್ಟರ್ ಲಾಂಚ್ ಮಾಡಿ ತಂಡಕ್ಕೆ ಹರಸಿದ್ದಾರೆ.
‘ಚಿತ್ರದ ಶೀರ್ಷಿಕೆಯನ್ನು ಪುನೀತ್ ಅನಾವರಣ ಮಾಡಿರುವುದರಿಂದ ನಮಗೂ ಪವರ್ ಸಿಕ್ಕಂತಾಗಿದೆ. ಶೀರ್ಷಿಕೆ ಹೇಳುವಂತೆ ಇದೊಂದು ತ್ರಿಕೋನ ಪ್ರೇಮಕಥೆಯುಳ್ಳ ಸಿನಿಮಾ. ಅಶ್ವಿನ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಮಧ್ಯಮ ವರ್ಗದ ಹುಡುಗನ ಸೋತು ಗೆಲ್ಲುವ ಕಥೆ ಇದು. ಧನುಶ್ರೀ ಅವರದ್ದೂ ಅದೇ ಹಾದಿಯಲ್ಲಿ ಸಾಗುವ ಪಾತ್ರ. ಮಲಯಾಳಂ ಮತ್ತು ತಮಿಳಿನಲ್ಲಿ ಗುರುತಿಸಿಕೊಂಡಿರುವ ಇಂದೂಜಾ ಸಹ ಮತ್ತೋರ್ವ ನಾಯಕಿಯಾದ್ದಾರೆ’ ಎಂಬುದು ನಿರ್ದೇಶಕರ ಮಾತು. ಪಿನಾಕಿನ ಬ್ಯಾನರ್ನಲ್ಲಿ ಅಶ್ವಿನ್ ಮತ್ತು ನಿರಂಜನ್ ಚಿತ್ರ ನಿರ್ವಣವಾಗಿದ್ದು, ವಿನೋದ್ ಮಂಡ್ಯ ಛಾಯಾಗ್ರಹಣ, ಆಕಾಶ್ ಜಾಧವ್ ಸಂಗೀತ ನೀಡಿದ್ದಾರೆ. ವಿಜೇಂದ್ರ ಜೋಡಿದಾರ ಸಂಭಾಷಣೆ ಬರೆದಿದ್ದಾರೆ.