

ಮುಂಬೈ: ಲಾಕ್ಡೌನ್ ಮುಗಿಯುತ್ತಿದ್ದಂತೆಯೇ 'ಬಿಗ್ ಬಾಸ್' ಹಿಂದಿಯ 15ನೇ ಸೀಸನ್ ಶುರುವಾಗುತ್ತದೆ ಎಂಬ ಸುದ್ದಿಯಾಗಿದ್ದು, ಈ ಸೀಸನ್ನಲ್ಲಿ ಯಾರೆಲ್ಲ ಭಾಗವಹಿಸುತ್ತಾರೆ ಎಂಬ ಚರ್ಚೆ ಶುರುವಾಗಿದೆ.
ಈಗಾಗಲೇ ಈ ಕಾರ್ಯಕ್ರಮದಲ್ಲಿ ಯಾರ್ಯಾರು ಭಾಗವಹಿಸಬಹುದು ಎಂಬ ಊಹಾಪೋಹಗಳು ಶುರುವಾಗಿದ್ದು, ಈ ಪೈಕಿ ನಟಿ ಭೂಮಿಕಾ ಚಾವ್ಲಾ ಅವರ ಹೆಸರು ಸಹ ಕೇಳಿ ಬಂದಿದೆ. ಮಹೇಶ್ ಬಾಬು ಅಭಿನಯದ ತೆಲುಗು ಚಿತ್ರ 'ಒಕ್ಕಡು' ಮೂಲಕ ಜನಪ್ರಿಯರಾದ ಭೂಮಿಕಾ, ಆ ನಂತರ ಹಲವು ತೆಲುಗು ಚಿತ್ರಗಳಲ್ಲಿ ನಟಿಸಿದ್ದರು.
ಭೂಮಿಕಾ, ಕನ್ನಡದಲ್ಲೂ ಉಪೇಂದ್ರ ಅಭಿನಯದ 'ಗಾಡ್ಫಾದರ್' ಮತ್ತು ರವಿಚಂದ್ರನ್ ಅಭಿನಯದ 'ಲವ್ ಯೂ ಆಲಿಯಾ' ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ಅವರು, ಸಲ್ಮಾನ್ ಖಾನ್ ನಡೆಸಿಕೊಡುವ 'ಬಿಗ್ ಬಾಸ್'ನ 15ನೇ ಸೀಸನ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಆದರೆ, ಈ ಸುದ್ದಿಯನ್ನು ಭೂಮಿಕಾ ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ಇದೊಂದು ಸುಳ್ಳು ಸುದ್ದಿ. ನಾನು 'ಬಿಗ್ ಬಾಸ್'ನಲ್ಲಿ ಭಾಗವಹಿಸುತ್ತಿಲ್ಲ ಮತ್ತು ನನಗೆ ಆಫರ್ ಸಹ ಬಂದಿಲ್ಲ. ಆರಂಭದ ಮೂರು ಸೀಸನ್ಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ನನಗೆ ಆಫರ್ ಬಂದಿತ್ತು. ಆದರೆ, ನಾನು ಒಪ್ಪಿರಲಿಲ್ಲ. ಈಗ ಅವಕಾಶ ಬಂದರೂ ನಾನು ಒಪ್ಪುವುದಿಲ್ಲ. ಏಕೆಂದರೆ, 24 ಗಂಟೆಗಳ ಕಾಲ ಕ್ಯಾಮೆರಾ ಮುಂದೆ ಇರುವುದಕ್ಕೆ ನನಗೆ ಇಷ್ಟವಿಲ್ಲ' ಎಂದು ಅವರು ಹೇಳಿಕೊಂಡಿದ್ದಾರೆ.