

ಮುಂಬೈ: ಕಳೆದ ವರ್ಷ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಅಭಿನಯದ 'ಬದಾಯಿ ದೊ', 'ರಕ್ಷಾ ಬಂಧನ್' ಮತ್ತು 'ಗೋವಿಂದ ನಾಮ್ ಮೇರಾ' ಚಿತ್ರಗಳು ಬಿಡುಗಡೆಯಾಗಿವೆ. ಈ ಮೂರರಲ್ಲಿ ಒಂದು ಚಿತ್ರವಾದರೂ ಗೆಲ್ಲುವುದು ಬೇಡವಾ? ಅಕ್ಷಯ್ ಕುಮಾರ್, ವಿಕ್ಕಿ ಕೌಶಾಲ್ ಮತ್ತು ರಾಜ್ಕುಮಾರ್ ರಾವ್ರಂತಹ ನಟರ ಜತೆಗೆ ನಟಿಸಿದರೂ, ಅದ್ಯಾಕೋ ಮೂರರಲ್ಲಿ ಯಾವುದೇ ಚಿತ್ರಗಳೂ ಗೆಲ್ಲಲಿಲ್ಲ.
ಆದರೆ, ಈ ವರ್ಷ ಹಾಗಿರುವುದಿಲ್ಲ, ದೊಡ್ಡ ಯಶಸ್ಸಿನ ರುಚಿ ನೋಡಲಿದ್ದೇನೆ ಎಂಬ ವಿಶ್ವಾಸದಲ್ಲಿದ್ದಾರೆ ಭೂಮಿ. ಆ ವಿಶ್ವಾಸಕ್ಕೆ ಕಾರಣವೇನು ಗೊತ್ತಾ? ಈ ವರ್ಷ ಭೂಮಿ ಅಭಿನಯದ ಆರು ಚಿತ್ರಗಳು ಬಿಡುಗಡೆಯಾಗಲಿಕ್ಕಿವೆ. ಅದೆಲ್ಲಕ್ಕಿಂತ ಹೆಚ್ಚಾಗಿ, ಈ ಚಿತ್ರಗಳಿಗೆ ಅವರಿಗೆ ವಿಭಿನ್ನವಾದ ಪಾತ್ರಗಳು ಇವೆಯಂತೆ. ಈ ಚಿತ್ರಗಳು ಮತ್ತು ಪಾತ್ರಗಳು ಖಂಡಿತಾ ತಮಗೆ ಯಶಸ್ಸು ತಂದುಕೊಡಲಿವೆ ಎಂದು ಭೂಮಿ ಹೇಳಿಕೊಂಡಿದ್ದಾಳೆ.
ಅಂದಹಾಗೆ, ಬಿಡುಗಡೆಯಾಗಲಿರುವ ಚಿತ್ರಗಳು ಯಾವುವು ಗೊತ್ತಾ? ಅನುಭವ್ ಸಿನ್ಹಾ ನಿರ್ದೇಶನದ 'ಭೀಡ್', ಅಜಯ್ ಬೆಹಲ್ ನಿರ್ದೇಶನದ 'ದಿ ಲೇಡಿ ಕಿಲ್ಲರ್', ಸುಧೀರ್ ಮಿಶ್ರಾ ನಿರ್ದೇಶನದ 'ಅಫ್ವಾ', ಗೌರಿ ಖಾನ್ ನಿರ್ಮಾಣದ 'ಭಕ್ಷಕ್', ಮುದ್ದಾಸರ್ ಅಜಿಜ್ ನಿರ್ದೇಶನದ 'ಮೇರಿ ಹಸ್ಬೆಂಡ್ ಕೀ ಬೀವಿ' ಮತ್ತು ಇನ್ನೊಂದು ಹೆಸರಿಡದ ಚಿತ್ರ ಈ ಪಟ್ಟಿಯಲ್ಲಿದೆ.
ಈ ವರ್ಷ ತನ್ನದೇ ಎಂದು ಹೇಳಿಕೊಂಡಿರುವ ಭೂಮಿ, 'ಒಬ್ಬ ನಟಿಯಾಗಿ ಇದು ನನ್ನ ವರ್ಷ. ಈ ಎಲ್ಲ ಚಿತ್ರಗಳಲ್ಲೂ ವಿಭಿನ್ನವಾದ ಪಾತ್ರಗಳನ್ನು ಮಾಡುತ್ತಿರುವುದಷ್ಟೇ ಅಲ್ಲ, ಶಕ್ತಿಶಾಲಿ ಮಹಿಳೆಯರಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಒಬ್ಬ ಕಲಾವಿದೆಯಾಗಿ ಇದಕ್ಕಿಂತ ವಿಭಿನ್ನವಾದ ಪಾತ್ರಗಳನ್ನು ನಾನು ನಿರೀಕ್ಷಿಸುವುದಕ್ಕೆ ಸಾಧ್ಯವೇ ಇಲ್ಲ' ಎಂದು ಭೂಮಿ ಹೇಳಿಕೊಂಡಿದ್ದಾರೆ.