ಒಬ್ಬರು ಕೈದಿ, ಮತ್ತೊಬ್ಬರು ಪೊಲೀಸ್! ಮೆಗಾ ಸಹೋದರರು ಒಟ್ಟಿಗೆ ಕಾಣಿಸಿಕೊಂಡ ವಿಡಿಯೋ ವೈರಲ್...

Published on
ತೆಲುಗಿನ ನಟ ರಾಮ್ ಚರಣ್ ತೇಜ್ ಇಂದು ಒಂದು 'ಅದ್ಭುತ'ವಾದ ವಿಡಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ, ಈ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಂದಹಾಗೆ, ಈ ವಿಡಿಯೋದಲ್ಲಿ ನಟ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಒಟ್ಟಿಗೆ ಅವರ ಮುಂಬರುವ ಚಲನಚಿತ್ರಗಳ ಶೂಟಿಂಗ್ ಸೆಟ್​ಗಳಲ್ಲಿ ಭಾಗವಹಿಸಿರುವುದು ಕಂಡುಬಂದಿದೆ. ಈ ವಿಡಿಯೋ ಕಂಡ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.
ಹೌದು, ನಟ ಪವನ್ ಕಲ್ಯಾಣ್ ಮತ್ತು ಅವರ 'ಭೀಮಲಾ ನಾಯಕ್' ಸಿನಿಮಾತಂಡ ಚಿರಂಜೀವಿ ಅವರ ಮುಂಬರುವ ಚಿತ್ರ 'ಗಾಡ್‌ಫಾದರ್' ಸೆಟ್‌ಗೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ 'ಗಾಡ್‌ಫಾದರ್‌' ಚಿತ್ರಕ್ಕಾಗಿ ಚಿರಂಜೀವಿ ಕೈದಿಯ ಲುಕ್‌ನಲ್ಲಿ ಶೂಟಿಂಗ್ ವೇಳೆ ಕಾಣಿಸಿಕೊಂಡಿದ್ದು, ನಟ ಪವನ್ ಕಲ್ಯಾಣ್ ಅವರು ತಮ್ಮ 'ಭೀಮಲಾ ನಾಯಕ್' ಚಿತ್ರದ ಪೊಲೀಸ್ ಪಾತ್ರದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ, ಇವರಿಬ್ಬರೂ ಒಟ್ಟಿಗೆ ಕ್ಯಾಮೆರಾಗಳಿಗೆ ಇದೇ ಕೈದಿ ಮತ್ತು ಪೊಲೀಸ್ ಲುಕ್​ನಲ್ಲಿ ಪೋಸ್ ನೀಡಿದ್ದಾರೆ.
ಬಳಿಕ, ಮೆಗಾ ಸ್ಟಾರ್ ಚಿರಂಜೀವಿ ಮತ್ತು 'ಗಾಡ್‌ಫಾದರ್' ಚಿತ್ರತಂಡ ಕೂಡಾ ಪವನ್ ಕಲ್ಯಾಣ್ ಅವರ 'ಭೀಮ್ಲಾ ನಾಯಕ್' ಸೆಟ್​ಗೆ ಹೋಗಿದ್ದಾರೆ. ಹಾಗಾಗಿ, 'ಗಾಡ್‌ಫಾದರ್' ಮತ್ತು 'ಭೀಮ್ಲಾ ನಾಯಕ್' ಸೆಟ್‌ಗಳಿಂದ ಈ ಒಂದು ಒಳ್ಳೆಯ ವಿಡಿಯೋವನ್ನು ಹಂಚಿಕೊಂಡ ರಾಮ್ ಚರಣ್ ಅದಕ್ಕೆ, "#GODFATHER ಮತ್ತು #BHEEMLANAYAKAK ಪರಸ್ಪರರ ಚಿತ್ರ ಸೆಟ್‌ಗಳಿಗೆ ಭೇಟಿ ನೀಡಿದ ಕ್ಷಣ...! #BheemlaNayakOn25thFeb", ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.
ಮತ್ತೊಂದೆಡೆ, 'ಗಾಡ್‌ಫಾದರ್‌' ತಂಡದಿಂದ 'ಭೀಮಲಾ ನಾಯಕ್‌'ಗೆ ಆಲ್‌ ದಿ ಬೆಸ್ಟ್‌ ಎಂಬ ಶುಭ ಹಾರೈಕೆಗಳೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ. ಈ ಇಬ್ಬರೂ ನಟರು ತಮ್ಮ ತಮ್ಮ ಸಿನಿಮಾ ತಂಡಗಳೊಂದಿಗೆ ಕೆಲವು ಸಂತೋಷಕರ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವುದು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಟಾಲಿವುಡ್​ನ ಇಬ್ಬರೂ ದೊಡ್ಡ ಸ್ಟಾರ್ ನಟರು ಮತ್ತು ಸಹೋದರರು ಒಟ್ಟಿಗೆ ಕಾಣಿಸಿಕೊಂಡಿರುವ ಈ ವಿಡಿಯೋ ಇಂದು ಸಾಮಾಜಿಕ ಜಾಲತಾಣದಲ್ಲಿ ಸಿನಿಪ್ರೇಕ್ಷಕರನ್ನು ಸಖತ್ ರಂಜಿಸುತ್ತಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net