ಶಿವಣ್ಣ ಹುಟ್ಟುಹಬ್ಬಕ್ಕೆ 'ಭಜರಂಗಿ 2' ಟೀಸರ್​ ಬಿಡುಗಡೆ ...

Bhajarangi 2 - Final
Published on

ಬೆಂಗಳೂರು: ಇಂದು ಶಿವರಾಜಕುಮಾರ್​ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಹಲವು ಚಿತ್ರತಂಡಗಳು ಅವರಿಗೆ ಶುಭ ಹಾರೈಸಿವೆ. ಈ ಪೈಕಿ 'ಭಜರಂಗಿ 2' ಚಿತ್ರತಂಡವು ಶಿವರಾಜಕುಮಾರ್​ ಅವರ ವಿಶೇಷ ಟೀಸರ್​ ಬಿಡುಗಡೆ ಮಾಡಿದೆ.

ಸೋಮವಾರ ಬೆಳಿಗ್ಗೆ ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ 'ಭಜರಂಗಿ 2' ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು, ಒಳ್ಳೆಯ ವೀಕ್ಷಣೆ ಪಡೆಯುತ್ತಿದೆ. ಬಿಡುಗಡೆಯಾದ ಎರಡು ತಾಸಿನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.

'ಭಜರಂಗಿ 2' ಚಿತ್ರದ ಚಿತ್ರೀಕರಣ ಕಳೆದ ವರ್ಷ ಮೊದಲ ಲಾಕ್​ಡೌನ್​ಗೂ ಮೊದಲೇ ಬಹುತೇಕ ಮುಗಿದಿತ್ತು. ಇನ್ನು, ಲಾಕ್​ಡೌನ್​ ನಂತರ ಉಳಿದ ಭಾಗದ ಚಿತ್ರೀಕರಣ ಮುಗಿದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳೂ ಆಗಿ, ಚಿತ್ರ ಮೇನಲ್ಲಿ ಬಿಡುಗಡೆ ಎಂದು ನಿರ್ಮಾಪಕ ಜಯಣ್ಣ ಘೋಷಿಸಿದ್ದರು. ಆದರೆ, ಎರಡನೆಯ ಲಾಕ್​ಡೌನ್​ನಿಂದಾಗಿ ಚಿತ್ರ ಅನಿರ್ಧಿಷ್ಟಾವಧಿ ಮುಂದಕ್ಕೆ ಹೋಗಿದೆ. ಚಿತ್ರಪ್ರದರ್ಶನ ಪ್ರಾರಂಭವಾಗಿ, ಎಲ್ಲವೂ ಸಹಜ ಸ್ಥಿತಿಗೆ ಬಂದ ನಂತರ ಚಿತ್ರ ಬಿಡುಗಡೆ ಆಗಲಿದೆ. ಬಹುಶಃ ಈ ವರ್ಷದ ಕೊನೆಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ಎ. ಹರ್ಷ ನಿರ್ದೇಶನದ 'ಭಜರಂಗಿ 2' ಚಿತ್ರದಲ್ಲಿ ಶಿವರಾಜಕುಮಾರ್​ಗೆ ನಾಯಕಿಯಾಗಿ ಭಾವನಾ ಮೆನನ್​ ನಟಿಸಿದ್ದು, ಮಿಕ್ಕಂತೆ ಶ್ರುತಿ, 'ಭಜರಂಗಿ' ಲೋಕಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅರ್ಜುನ್​ ಜನ್ಯ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಸ್ವಾಮಿ ಗೌಡ ಛಾಯಾಗ್ರಹಣ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net