ತೆಲುಗಿಗೆ ಭಜರಂಗಿ-2; ನಾಳೆ ಟ್ರೇಲರ್ ಬಿಡುಗಡೆ

Bhajarangi 2
Published on

ಬೆಂಗಳೂರು: ಶಿವರಾಜಕುಮಾರ್ ಅಭಿನಯದ ‘ಭಜರಂಗಿ 2’ ಬಿಡುಗಡೆಗೆ ಇನ್ನು ಕೇವಲ 10 ದಿನಗಳಿವೆ. ಅ. 29ಕ್ಕೆ ಚಿತ್ರ ಬಿಡುಗಡೆಯಾಗಲಿದ್ದು, ಇನ್ನೂ ಚಿತ್ರತಂಡದ ಪ್ರಚಾರ ಶುರು ಮಾಡಿಲ್ಲ ಎಂಬ ಬೇಸರ ಅಭಿಮಾನಿಗಳ ವಲಯದಲ್ಲಿದೆ. ಈ ಬೇಸರವನ್ನು ಕಡಿಮೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದ್ದು, ಮೊದಲ ಹಂತವಾಗಿ ನಾಳೆ ಬುಧವಾರ (ಅ. 20) ಸಂಜೆ 06:45ಕ್ಕೆ ಯೂಟ್ಯೂಬ್​ನ ಆನಂದ್ ಆಡಿಯೋ ಚಾನಲ್​ನಲ್ಲಿ ಟ್ರೇಲರ್ ಬಿಡುಗಡೆಯಾಗಲಿದೆ. ಇದಾದ ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಆಯೋಜಿತವಾಗಿದ್ದು, ಈ ಸಮಾರಂಭದಲ್ಲಿ ಸ್ಟಾರ್ ನಟರು ಭಾಗವಹಿಸುವ ನಿರೀಕ್ಷೆ ಇದೆ. ಈ ವಿಷಯವನ್ನು ಚಿತ್ರತಂಡ ಗೌಪ್ಯವಾಗಿಟ್ಟಿದ್ದು, ಯಾರೆಲ್ಲ ಭಾಗವಹಿಸುತ್ತಾರೆ ಎಂಬ ಪಟ್ಟಿ ಸದ್ಯದಲ್ಲೇ ಹೊರಬೀಳಲಿದೆ.

ಇನ್ನು, ‘ಭಜರಂಗಿ 2’ ಚಿತ್ರವು ತೆಲುಗಿನಲ್ಲಿ ‘ಜೈ ಭಜರಂಗಿ’ ಎಂಬ ಹೆಸರಿನಲ್ಲಿ ಡಬ್ ಆಗಿದ್ದು, ಈ ಚಿತ್ರ ಸಹ ಅ. 29ರಂದೇ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಗಣೇಶ್ ವಿಡಿಯೋದ ನಿರಂಜನ್ ಪನ್ಸಾರಿ ಎನ್ನುವವರು ಡಬ್ಬಿಂಗ್ ಹಕ್ಕುಗಳನ್ನು ಪಡೆದಿದ್ದು, ಅವರೇ ಆಂಧ್ರ ಮತ್ತು ತೆಲಂಗಾಣದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಿದ್ದಾರಂತೆ. ‘ಭಜರಂಗಿ 2’ ಚಿತ್ರವನ್ನು ಜಯಣ್ಣ ನಿರ್ವಿುಸಿದ್ದು, ಎ. ಹರ್ಷ ನಿರ್ದೇಶನ ಮಾಡಿದ್ದಾರೆ. ಶಿವರಾಜಕುಮಾರ್ ಜತೆಗೆ ಭಾವನಾ ಮೆನನ್, ಶ್ರುತಿ, ‘ಭಜರಂಗಿ’ ಲೋಕಿ ಮುಂತಾದವರು ನಟಿಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net