

ಬೆಂಗಳೂರು: 'ಭೈರತಿ ರಣಗಲ್' ಎಂಬ ಚಿತ್ರದಲ್ಲಿ ಶಿವರಾಜಕುಮಾರ್ ನಟಿಸುತ್ತಾರೆ ಎಂಬ ಸುದ್ದಿಯೊಂದು ಕೆಲವೇ ದಿನಗಳ ಹಿಂದೆ ಕೇಳಿಬಂದಿತ್ತು. ಈಗ ಆ ಚಿತ್ರತಂಡದಿಂದ ಇನ್ನೊಂದು ಅಪ್ಡೇಟ್ ಬಂದಿದೆ. ಅದೇನೆಂದರೆ, 'ಭೈರತಿ ರಣಗಲ್' ಚಿತ್ರವು ಪ್ಯಾನ್ ಇಂಡಿಯಾ ಚಿತ್ರವಾಗಿ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆಯಂತೆ.
'ಮಫ್ತಿ' ಬಿಡುಗಡೆಯಾದ ನಂತರದ ದಿನಗಳಲ್ಲಿ 'ಭೈರತಿ ರಣಗಲ್' ಎಂಬ ಆ ಚಿತ್ರದ ಮುಂದುವರೆದ ಭಾಗ ಬರುತ್ತದೆ, ಅದರಲ್ಲಿ ಭೈರತಿ ರಣಗಲ್ನ ಹಿಂದಿ ವೃತ್ತಾಂತವಿರುತ್ತದೆ, ಈ ಚಿತ್ರವನ್ನು ಗೀತಾ ಶಿವರಾಜಕುಮಾರ್ ಅವರೇ ನಿರ್ಮಿಸುತ್ತಾರೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಆದರೆ, ಆ ಚಿತ್ರವನ್ನು ನಿರ್ದೇಶಿಸಬೇಕಿದ್ದ ನರ್ತನ್, ಯಶ್ ಚಿತ್ರ ನಿರ್ದೇಶಿಸಿಬೇಕಿದ್ದರಿಂದ 'ಭೈರತಿ ರಣಗಲ್' ನೆನೆಗುದಿಗೆ ಬಿದ್ದಿತ್ತು.
ಆದರೆ, ಕಳೆದ ತಿಂಗಳು ಶಿವರಾತ್ರಿ ಹಬ್ಬದ ಪ್ರಯುಕ್ತ ಆ ಚಿತ್ರದ ಘೋಷಣೆಯಾಗಿದೆ. 'ಭೈರತಿ ರಣಗಲ್' ಚಿತ್ರವು 'ಮಫ್ತಿ'ಯ ಪ್ರೀಕ್ವೆಲ್ ಆಗಿದ್ದು, ಈ ಚಿತ್ರದಲ್ಲಿ ಭೈರತಿ ರಣಗಲ್ ನಡೆದು ಬಂದ ಹಾದಿಯ ಬಗ್ಗೆ ಚಿತ್ರಣ ಇರುತ್ತದಂತೆ. 'ಮಫ್ತಿ' ಚಿತ್ರ ನಿರ್ದೇಶಿಸುವುದರ ಜತೆಗೆ ಭೈರತಿ ರಣಗಲ್ ಪಾತ್ರವನ್ನು ಸೃಷ್ಟಿಸಿದ್ದ ನರ್ತನ್ ಅವರೇ ಈ ಚಿತ್ರಕ್ಕೂ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಸದ್ಯ ಆ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ನರ್ತನ್ ತೊಡಗಿಸಿಕೊಂಡಿದ್ದು, ಶಿವರಾಜಕುಮಾರ್ ಒಪ್ಪಿರುವ ಒಂದಿಷ್ಟು ಚಿತ್ರಗಳ ಕೆಲಸಗಳು ಮುಗಿದ ಮೇಲೆ 'ಭೈರತಿ ರಣಗಲ್' ಚಿತ್ರೀಕರಣ ಪ್ರಾರಂಭವಾಗಲಿದೆ.