

ಡಾ. ರಾಜಕುಮಾರ್ ಅವರ ಯಶಸ್ವಿ ಚಿತ್ರಗಳಲ್ಲಿ ‘ಭಾಗ್ಯವಂತರು’ ಸಹ ಒಂದು. ದ್ವಾರಕೀಶ್ ನಿರ್ವಣದ, ಭಾರ್ಗವ ನಿರ್ದೇಶನದ ಈ ಚಿತ್ರ ಆ ಕಾಲಕ್ಕೆ ಸೂಪರ್ ಹಿಟ್ ಆಗಿತ್ತು. ಈಗ ‘ಭಾಗ್ಯವಂತರು’ ಚಿತ್ರ ನವೆಂಬರ್ನಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಡಿಐ ಮಾಡಿಸಿ, 7.1 ಸೌಂಡ್ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಹಿಂದೆ ರಾಜಕುಮಾರ್ ಅವರ ‘ಆಪರೇಷನ್ ಡೈಮಂಡ್ ರಾಕೆಟ್’, ‘ನಾನೊಬ್ಬ ಕಳ್ಳ’, ‘ದಾರಿ ತಪ್ಪಿದ ಮಗ’ ಚಿತ್ರಗಳನ್ನು ಹೊಸ ತಂತ್ರಜ್ಞಾನದಲ್ಲಿ ಬಿಡುಗಡೆ ಮಾಡಿದ್ದ ಮುನಿರಾಜು, ಈ ಚಿತ್ರವನ್ನೂ ಬಿಡುಗಡೆ ಮಾಡುತ್ತಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ಹಿರಿಯ ನಿರ್ದೇಶಕ ಭಾರ್ಗವ, ‘ನನ್ನ ಮೊದಲ ನಿರ್ದೇಶನದ ಚಿತ್ರ ‘ಭಾಗ್ಯವಂತರು’. ದ್ವಾರಕೀಶ್ ಈ ಚಿತ್ರದ ನಿರ್ವಪಕರು. ನಾನು ಆಗಲೇ ರಾಜಕುಮಾರ್ ನಟಿಸಿದ್ದ ‘ಬಬ್ರುವಾಹನ’, ‘ನಾ ನಿನ್ನ ಮರೆಯಲಾರೆ’, ‘ಜಗ ಮೆಚ್ಚಿದ ಮಗ’ ಸೇರಿ ಕೆಲವು ಚಿತ್ರಗಳಿಗೆ ಸಹ ನಿರ್ದೇಶನ ಮಾಡಿದ್ದೆ. ಹಾಗಾಗಿ ರಾಜ್ ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ . ದ್ವಾರಕೀಶ್ ಮತ್ತು ರಾಜಕುಮಾರ್ ಇಬ್ಬರೂ ನೀವೆ ಈ ಚಿತ್ರ ನಿರ್ದೇಶನ ಮಾಡಿ ಎಂದರು. 44 ವರ್ಷಗಳ ಹಿಂದೆ ಈ ಚಿತ್ರ ಮಾಡಿದಾಗ, ಅದು ದೊಡ್ಡ ಯಶಸ್ಸು ಕಾಣಬಹುದು, ಜನ ಇಷ್ಟೊಂದು ಇಷ್ಟಪಡಬಹುದು ಎಂದು ನಿರೀಕ್ಷಿಸಿರಲಿಲ್ಲ’ ಎನ್ನುತ್ತಾರೆ.
ಮುನಿರಾಜುಗೆ 1978ರಿಂದ ಕನ್ನಡ ಚಿತ್ರರಂಗದೊಂದಿಗೆ ನಂಟಂತೆ. ‘18 ವರ್ಷಗಳ ಕಾಲ ವಜ್ರೇಶ್ವರಿ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೇನೆ. ಪಾರ್ವತಮ್ಮ ರಾಜಕುಮಾರ್ ನನ್ನನ್ನು ಚಿತ್ರಮಂದಿರದ ಆರ್ಪಿಯಾಗಿ ನೇಮಕ ಮಾಡಿ ಯಳಂದೂರಿಗೆ ಕಳುಹಿಸಿದ್ದರು. ಅಲ್ಲಿಂದ ಅವರ ಕುಟುಂಬದ ಜತೆಗೆ ಒಡನಾಟ ಇದೆ. ನಾನು ಅಣ್ಣಾವ್ರ ಅಪ್ಪಟ ಅಭಿಮಾನಿ. ಈ ಹಿಂದೆ ರಾಜಕುಮಾರ್ ಅವರ ಚಿತ್ರಗಳನ್ನು ಮರುಬಿಡುಗಡೆ ಮಾಡಿ ಲಾಭ ನೋಡಿದ್ದೆ. ಈಗ ‘ಭಾಗ್ಯವಂತರು’ 150 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇನೆ’ ಎನ್ನುತ್ತಾರೆ ಮುನಿರಾಜು.