

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್, ಸೋಮವಾರ ಮುಂಜಾನೆ ನಿಧನರಾಗಿದ್ದಾರೆ. ಇಂದು ಸಂಜೆ ಅವರ ಅಂತ್ಯಕ್ರಿಯೆ ನಡೆಯಲಿದ್ದು, ನೇತ್ರದಾನ ಮಾಡುವ ಮೂಲಕ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಇದನ್ನೂ ಓದಿ: ಆರ್ಎಸ್ಎಸ್ ಬಗ್ಗೆ ರಾಜಮೌಳಿ ಸಿನಿಮಾ?
ಡಾ. ರಾಜಕುಮಾರ್ ಅವರ ಅನುಯಾಯಿ ಮತ್ತು ಅವರ ಕುಟುಂಬಕ್ಕೆ ಆಪ್ತರಾಗಿದ್ದ ಭಗವಾನ್ ಅವರು, ಡಾ. ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರಂತೆಯೇ ಬದುಕಿದ್ದಾಗಲೇ ತಮ್ಮ ನಿಧನ ನಂತರ ನೇತ್ರದಾನ ಮಾಡುವುದಕ್ಕೆ ಬರೆದುಕೊಟ್ಟಿದ್ದರು. ಅವರ ಆಸೆಯಂತೆ ನೇತ್ರದಾನ ಆಗುತ್ತಿದ್ದು, ಅವರ ಕಣ್ಣುಗಳನ್ನು ಡಾ. ರಾಜಕುಮಾರ್ ಅವರ ಐ ಬ್ಯಾಂಕ್ಗೆ ದಾನ ಮಾಡಲಿದ್ದೇವೆ ಎಂದು ಅವರ ಹಿರಿಯ ಮಗ ಜ್ಯೋತಿಂದರ್ ತಿಳಿಸಿದ್ದಾರೆ.
ಇನ್ನು, ಭಗವಾನ್ ಅವರ ಪಾರ್ಥೀವ ಶರೀರವನ್ನು, ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಸಂಜೆ 4ರವರೆಗೂ ಅಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಆ ನಂತರ ಚಾಮರಾಜಪೇಟೆಯ ಚಿತಾಗಾರದಲ್ಲಿ ಅಯ್ಯಂಗಾರ್ ಸಂಪ್ರದಾಯದಂತೆ ಸಂಜೆ ಅಂತ್ಯಕ್ರಿಯೆ ನಡೆಲಿದೆ.