ಏ.30ಕ್ಕೆ ಬಿಡುಗಡೆಯಾಗಲಿದೆ 'ಬರ್ಕ್ಲಿ' ಟೀಸರ್ ...

Berklee - Final
Published on

ಬೆಂಗಳೂರು: 'ಬರ್ಕ್ಲಿ' ಎಂದ ಕೂಡಲೇ ಎಲ್ಲರಿಗೂ ಮೊದಲಿಗೆ ನೆನಪಿಗೆ ಬರುವುದು ಸಿಗರೇಟ್. ಕನ್ನಡ ಚಿತ್ರರಂಗದಲ್ಲಿ ಇದೀಗ 'ಬರ್ಕ್ಲಿ' ಎಂಬ ಚಿತ್ರವು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಚಿತ್ರಕ್ಕೂ ಸಿಗರೇಟ್​ಗೂ ಯಾವುದೇ ರೀತಿಯ ಸಂಬಂಧವಿಲ್ಲ ಎನ್ನುತ್ತಾರೆ ಚಿತ್ರತಂಡದವರು. ಹಾಗಾದರೆ, 'ಬರ್ಕ್ಲಿ' ಎಂದರೇನು? ಅದನ್ನು ಚಿತ್ರಮಂದಿರದಲ್ಲೇ ನೋಡಿ ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ನಿರ್ದೇಶಕ ಸುಮಂತ್ ಕ್ರಾಂತಿ.

ಈಗಾಗಲೇ 'ಬರ್ಕ್ಲಿ' ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದ್ದು, ಶುಕ್ರವಾರ (ಏಪ್ರಿಲ್ 30) ರ ಸಂಜೆ 5 ಗಂಟೆಗೆ ಯೂಟ್ಯೂಬ್​ನ ಜಂಕಾರ್ ಮ್ಯೂಸಿಕ್ ಚಾನಲ್​ನಲ್ಲಿ ಬಿಡುಗಡೆಯಾಗುತ್ತಿದೆ.

ಸಂತೋಷ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆನೇಕಲ್ ಬಾಲರಾಜ್ ಅವರು ನಿರ್ಮಿಸುತ್ತಿರುವ 'ಬರ್ಕ್ಲಿ' ಚಿತ್ರದ ಪ್ರಥಮ ಪ್ರತಿ‌ ಸಿದ್ಧವಾಗಿದ್ದು, ಲಾಕ್​ಡೌನ್​ ಮುಗಿದ ನಂತರ ಚಿತ್ರ ಬಿಡುಗಡೆಯಾಗಲಿದೆ. 'ಕರಿಯ', 'ಗಣಪ', 'ಕರಿಯ ೨' ಚಿತ್ರಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್ 'ಬರ್ಕ್ಲಿ‌' ಚಿತ್ರವನ್ನು ನಿರ್ಮಿಸಿದರೆ, ಸುಮಂತ್ ಕ್ರಾಂತಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

'ಗಣಪ', 'ಕರಿಯ ೨' ಚಿತ್ರಗಳಲ್ಲಿ ನಟಿಸಿರುವ ಸಂತೋಷ್ ಬಾಲರಾಜ್ ಈ ಚಿತ್ರದ ನಾಯಕರಾದರೆ, ಕೇಂದ್ರ ಸರ್ಕಾರದ ನೋ ಸ್ಮೋಕಿಂಗ್ ಜಾಹೀರಾತಿನ ಮೂಲಕ ಬಾಲನಟಿಯಾಗಿ ಖ್ಯಾತರಾಗಿದ್ದ ಸಿಮ್ರಾನ್ ನಾಟೇಕರ್ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಮಿಕ್ಕಂತೆ ಚರಣರಾಜ್, ಶೃತಿ, ಬಲ ರಾಜವಾಡಿ , ಬುಲೆಟ್ ಪ್ರಕಾಶ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.

'ಬಹದ್ದೂರ್' ಚೇತನ್ ಕುಮಾರ್, ಅಭಿ ಕನಸಿನ ಕವನ‌ ಈ ಚಿತ್ರದ ಹಾಡುಗಳನ್ನು ರಚಿಸಿದ್ದು, ಜ್ಯೂಡ ಸ್ಯಾಂಡಿ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್, ಎನ್.ಎಂ.ಸೂರಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net