2ನೇ ದಿನ ಚಿತ್ರೋತ್ಸವ ಕೂಲ್ ಕೂಲ್: ‘ಬೆಲ್ ಬಾಟಂ’ ಹೌಸ್​ಫುಲ್ ಪ್ರದರ್ಶನ

Film Festival
Published on

ಬೆಂಗಳೂರು: 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮೊದಲ ದಿನ ಪಾಸ್ ವಿತರಣೆ ಸೇರಿ ಕೆಲ ವಿಚಾರಗಳಲ್ಲಿ ಗೊಂದಲ ಉಂಟಾಗಿತ್ತು. ಆದರೆ ಎರಡನೇ ದಿನ ಕಂಪ್ಲೀಟ್ ವಾತಾವರಣ ಕೂಲ್ ಆಗಿ ಚಿತ್ರಪ್ರೇಮಿಗಳು ತಮ್ಮ ನೆಚ್ಚಿನ ಸಿನಿಮಾ ನೋಡುತ್ತಿದ್ದದ್ದು ಒರಾಯನ್ ಮಾಲ್​ನಲ್ಲಿ ಕಂಡು ಬಂತು.

ಬೆಳಗಿನಿಂದಲೇ ಕ್ಯೂ: ಒರಾಯನ್ ಮಾಲ್​ನ 11 ತೆರೆಗಳಲ್ಲಿ ದೇಶ-ವಿದೇಶಗಳ ಚಿತ್ರಗಳ ಜತೆಗೆ ಕನ್ನಡ ಸಿನಿಮಾಗಳೂ ಪ್ರದರ್ಶನಗೊಂಡವು. ಸೆನೆಗಲ್​ನ ‘ನಫೀಸ್ ಫಾದರ್’, ಇರಾನ್​ನ ‘ಜಸ್ಟ್ 6.5’ ಸೇರಿ ಕೆಲ ಸಿನಿಮಾಗಳನ್ನು ನೋಡಲು ಜನ ಸ್ಕ್ರೀನ್​ನಿಂದ, ಹೊರಗಿನ ಗೇಟ್​ವರೆಗೂ ಕ್ಯೂ ನಿಂತ ದೃಶ್ಯ ಸಾಮಾನ್ಯವಾಗಿತ್ತು.

ಸಿನಿಮೋತ್ಸವದಲ್ಲಿ ಕಂಡ ಗಣ್ಯರು: ಚಿತ್ರೋತ್ಸವಕ್ಕೆ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಮಂಸೋರೆ, ಚೇತನ್ ಮುಂಡಾಡಿ, ಸಿ.ವಿ.ಶಿವಶಂಕರ್, ಎನ್.ಎಸ್. ಶಂಕರ್, ವೆಂಕಟ್ ಭಾರದ್ವಾಜ್ ಸೇರಿ ಸಾಕಷ್ಟು ಮಂದಿ ತಮ್ಮ ನೆಚ್ಚಿನ ಸಿನಿಮಾಗಳನ್ನು ನೋಡಿದರು. ನಟರಾದ ಬಾಲಾಜಿ ಮನೋಹರ್, ಪಂಕಜ್ ನಾರಾಯಣ್ ಸಹ ಚಿತ್ರೋತ್ಸವದಲ್ಲಿ ಕಂಡು ಬಂದರು.

‘ಬೆಲ್ ಬಾಟಂ’ ಹೌಸ್​ಫುಲ್ ಪ್ರದರ್ಶನ

ರಿಷಬ್ ಶೆಟ್ಟಿ-ಹರಿಪ್ರಿಯಾ ಪ್ರಧಾನಪಾತ್ರಗಳಲ್ಲಿ ಅಭಿನಯಿಸಿದ್ದ ‘ಬೆಲ್ ಬಾಟಂ’ ಸಿನಿಮಾ ಶುಕ್ರವಾರ ಪ್ರದರ್ಶನಗೊಂಡಿತು. ಈ ಚಿತ್ರ ಈಗಾಗಲೇ ಟಿವಿಯಲ್ಲಿ ಪ್ರಸಾರಗೊಂಡಿದೆ, ಚಿತ್ರಮಂದಿರದಲ್ಲಿ 125 ದಿನ ಓಡಿದೆ. ಆದರೂ ಇದನ್ನು ಸಿನಿಮೋತ್ಸವದಲ್ಲಿ ನೋಡಲು ಜನ ಮುಗಿಬಿದ್ದಿದ್ದರಿಂದ ಹೌಸ್​ಫುಲ್ ಪ್ರದರ್ಶನ ಕಂಡಿತು. ಈ ಸಂದರ್ಭ ಮಾತಿಗೆ ಸಿಕ್ಕ ಕಥೆಗಾರ ದಯಾನಂದ್ ಮತ್ತು ಸಂಭಾಷಣೆಕಾರ ರಘು ನಿಡುವಳ್ಳಿ, ‘ನಾನು ಚಿತ್ರೋತ್ಸವಕ್ಕೆ ಬಂದಾಗ ದೊಡ್ಡ ಕ್ಯೂ ಇತ್ತು. ಯಾವುದೋ ವಿದೇಶಿ ಚಿತ್ರಕ್ಕಾಗಿ ಎಂದುಕೊಂಡೆ. ಆದರೆ ನಮ್ಮ ಸಿನಿಮಾ ಪ್ರದರ್ಶನಗೊಳ್ಳುವ ಸ್ಕ್ರೀನ್​ನತ್ತ ಬಂದರೆ ಅವರೆಲ್ಲ ನಿಂತಿದ್ದು, ನಮ್ಮ ಸಿನಿಮಾ ನೋಡಲು ಎಂಬುದನ್ನು ನೋಡಿ ಖುಷಿಯಾಯಿತು’ ಎಂದರು. ಸಿನಿಮಾ ಮುಗಿದ ಮೇಲೆ ನಾಯಕಿ ಹರಿಪ್ರಿಯಾ ಕೂಡ ನೆರೆದಿದ್ದ ಪ್ರೇಕ್ಷಕರ ಜತೆ ಮಾತನಾಡಿದರು.

ಖಾಲಿ ಹೊಡೆದ ನವರಂಗ್

ಒರಾಯನ್ ಮಾಲ್​ನಲ್ಲಿ ಎಲ್ಲ ಶೋ ತುಂಬಿದ್ದರೆ, ಹತ್ತಿರದ ನವರಂಗ್ ಚಿತ್ರಮಂದಿರ ಪ್ರೇಕ್ಷಕರಿಲ್ಲದೆ ಭಣಗುಡುತ್ತಿತ್ತು. ಈ ಬಾರಿ ನವರಂಗ್​ನಲ್ಲಿಯೂ ಚಿತ್ರೋತ್ಸವದ ಪ್ರದರ್ಶನ ನಡೆಯುತ್ತದೆ ಎಂದು ಸಾಕಷ್ಟು ಪ್ರಚಾರ ಮಾಡಿದ್ದರೂ ಚಿತ್ರಮಂದಿರ ಖಾಲಿ ಇತ್ತು. ‘ಒರಾಯನ್ ಮಾಲ್​ಗೆ ಹೋದರೆ ಆಯ್ಕೆಗಳು ಹೆಚ್ಚಾಗಿ ಸಿಗುತ್ತವೆ. ಹಾಗಾಗಿ ಜನ ಇಲ್ಲಿಗಿಂತಲೂ ಅಲ್ಲಿಗೆ ಹೆಚ್ಚು ಹೋಗುತ್ತಾರೆ. ಪ್ರದರ್ಶನವಾಗುವ ಸಿನಿಮಾ ತಂಡ ಮತ್ತವರ ಆಪ್ತರು ಮಾತ್ರ ನವರಂಗ್​ಗೆ ಬರುತ್ತಾರೆ. ಜತೆಗೆ ಇಲ್ಲಿರುವುದು 600ಕ್ಕೂ ಹೆಚ್ಚು ಸೀಟ್​ಗಳು. ಎರಡು ಸ್ಕ್ರೀನ್ ಸೇರಿದರೆ ಅಷ್ಟು ಸೀಟ್​ಗಳಾಗುತ್ತವೆ. ಹಾಗಾಗಿ ಹೌಸ್​ಫುಲ್ ಆಗುವುದು ಕಡಿಮೆ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಸ್ವಯಂಸೇವಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net