

ಮುಂಬೈ: ಅಕ್ಷಯ್ ಕುಮಾರ್ ಅಭಿನಯದ ‘ಬೆಲ್ ಬಾಟಂ’ ಚಿತ್ರವು, ಆಗಸ್ಟ್ 19ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದರೂ, ಕಲೆಕ್ಷನ್ ಮಾತ್ರ ನೀರಸವಾಗಿದೆ.
ಸಾಮಾನ್ಯವಾಗಿ, ಅಕ್ಷಯ್ ಕುಮಾರ್ ಚಿತ್ರಗಳ ಮೊದಲ ದಿನದ ಕಲೆಕ್ಷನ್, ಭಾರತದಲ್ಲೇ 20 ಕೋಟಿ ರೂ.ಗಳಷ್ಟಿರುತ್ತದೆ. ಆದರೆ, ‘ಬೆಲ್ ಬಾಟಂ’ನ ಮೊದಲ ದಿನದ ಕಲೆಕ್ಷನ್ ಕೇವಲ 2.75 ಕೋಟಿ ರೂ ಎಂದು ಹೇಳಲಾಗುತ್ತಿದೆ. ಎರಡನೆಯ ದಿನ ಇನ್ನೂ ಕಡಿಮೆಯಾಗಿದ್ದು, 2.60 ಕೋಟಿ ರೂ ಕಲೆಕ್ಷನ್ ಆಗಿದೆಯಂತೆ.
ಹೀಗಾಗುವುದಕ್ಕೂ ಕಾರಣವಿದೆ. ಪ್ರಮುಖವಾಗಿ, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಚಿತ್ರಪ್ರದರ್ಶನಕ್ಕೆ ಅನುಮತಿ ಸಿಕ್ಕಿಲ್ಲ. ಹಲವು ರಾಜ್ಯಗಳಲ್ಲಿ ಶೇ. 50ರಷ್ಟು ಹಾಜರಾತಿಗೆ ಮಾತ್ರ ಅನುಮತಿ ಸಿಕ್ಕಿದ್ದು, ಅದರಲ್ಲೂ ಶೇ. 20ರಷ್ಟು ಮಾತ್ರ ಆಸನಗಳು ಭರ್ತಿಯಾಗುತ್ತಿವೆ ಎಂದು ಹೇಳಲಾಗುತ್ತಿದೆ. ಇನ್ನು, ಶೋಗಳ ಸಂಖ್ಯೆಯೂ ಸಾಕಷ್ಟು ಕಡಿಮೆಯಾಗಿದೆ. ಹಲವೆಡೆ ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದ, ರಾತ್ರಿ ಪ್ರದರ್ಶನಗಳು ರದ್ದಾಗಿವೆ. ಇದೆಲ್ಲದರಿಂದ, ಕಲೆಕ್ಷನ್ ವಿಪರೀತ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೂ, ಇಂತಹ ಸಂದರ್ಭದಲ್ಲಿ ಚಿತ್ರವನ್ನು ಬಿಡುಗಡೆ ಮಾಡಿರುವುದೇ ದೊಡ್ಡದು ಎಂಬ ಮೆಚ್ಚುಗೆ ಎಲ್ಲೆಡೆ ಕೇಳಿಬರುತ್ತಿದೆ.
1984ರಲ್ಲಿ ನಡೆದ ಇಂಡಿಯನ್ ಏರ್ಲೈನ್ಸ್ ಪ್ಲೇನ್ ಹೈಜಾಕ್ ಪ್ರಕರಣವನ್ನು ಈ ಚಿತ್ರ ಆಧರಿಸಿದ್ದು, ಚಿತ್ರದಲ್ಲಿ ಅಕ್ಷಯ್ ಕುಮಾರ್ ರಾ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೂ 'ಬೆಲ್ ಬಾಟಂ'ಗೂ ಏನು ಸಂಬಂಧ ಎಂಬ ಪ್ರಶ್ನೆ ಬರಬಹುದು. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರ ಕೋಡ್ ನೇಮ್ 'ಬೆಲ್ ಬಾಟಂ' ಎಂದಾಗಿದ್ದು, ಈ ಪ್ರಕರಣವನ್ನು ಭಾರತೀಯರು ಹೇಗೆ ಬೇಧಿಸುತ್ತಾರೆ ಎಂದು ತೋರಿಸಲಾಗಿದೆ.
‘ಬೆಲ್ ಬಾಟಂ’ ಚಿತ್ರವನ್ನು ರಂಜಿತ್ ತಿವಾರಿ ನಿರ್ದೇಶಿಸಿದ್ದು, ಪೂಜಾ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ವಾಶು ಭಾಗ್ನಾನಿ ಮತ್ತು ಜಾಕಿ ಭಾಗ್ನಾನಿ ಚಿತ್ರವನ್ನು ನಿರ್ಮಿಸಿದ್ದಾರೆ. ಇದೊಂದು ರೆಟ್ರೋ ಥ್ರಿಲ್ಲರ್ ಕಥೆಯಾಗಿದ್ದು ಅಕ್ಷಯ್ ಕುಮಾರ್ ಜತೆಗೆ ವಾಣಿ ಕಪೂರ್, ಲಾರಾ ದತ್ತ, ಹ್ಯೂಮಾ ಖುರೇಷಿ ಸೇರಿ ಹಲವರು ನಟಿಸಿದ್ದಾರೆ.