'ಹೊಂದಿಸಿ ಬರೆಯಿರಿ' ಅಂಗಳದಿಂದ ಬಂತು ಮೆಲೋಡಿ ಸಾಂಗ್ ...

Hondisi Bareyiri - Final
Published on

ಬೆಂಗಳೂರು: 'ಗುಳ್ಟು' ಖ್ಯಾತಿಯ ನವೀನ್​ ಶಂಕರ್​ ಸದ್ದಿಲ್ಲದೆ ಒಂದು ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಅದೇ 'ಹೊಂದಿಸಿ ಬರೆಯಿರಿ'. ಈ ಚಿತ್ರವನ್ನು ರಾಮೇನಹಳ್ಳಿ ಜಗನ್ನಾಥ್​ ನಿರ್ದೇಶಿಸಿದ್ದು, ಇತ್ತೀಚೆಗೆ ಚಿತ್ರದ ಒಂದು ಹಾಡು ಬಿಡುಗಡೆಯಾಗಿದೆ.

'ಬೆಳಕಲಿ ಕಾಣದ ಇರುಳಿಗೂ ...' ಎಂದು ಪ್ರಾರಂಭವಾಗುವ ಈ ಹಾಡನ್ನು ರಾಮೇನಹಳ್ಳಿ ಜಗನ್ನಾಥ್ ಅವರೇ ರಚಿಸಿದ್ದಾರೆ. ಜೋ ಕೋಸ್ಟ ಸಂಗೀತ ಸಂಯೋಜಿಸುವುದರ ಜೊತೆಗೆ ಹಾಡಿಗೆ ಧ್ವನಿಯಾಗಿದ್ದಾರೆ. ನವೀನ್​ ಜತೆಗೆ 'ಕೆಜಿಎಫ್' ಸಿನಿಮಾದಲ್ಲಿ ರಾಕಿ ಅಮ್ಮನಾಗಿ ನಟಿಸಿದ್ದ ಅರ್ಚನಾ ಜೋಯಿಸ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಪರಿಸ್ಥಿತಿಗಳನ್ನು ಹೊಂದಿಕೊಂಡು ಸಾಗುವ ಬದುಕಿನ ಪಯಣದ ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಏಳು ಯುವಕ-ಯುವತಿಯರ ಒಂದೊಂದು ಕಥೆ, ಪ್ರೀತಿ ಈ ಚಿತ್ರದಲ್ಲಿದೆ. ಈಗಾಗಲೇ 'ಹೊಂದಿಸಿ ಬರೆಯಿರಿ' ಸಿನಿಮಾದ ಶೂಟಿಂಗ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮಾಸ್ತಿ ಮಂಜು, ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

'ಹೊಂದಿಸಿ ಬರೆಯಿರಿ' ಚಿತ್ರವನ್ನು ಸಂಡೇ ಸಿನಿಮಾಸ್ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಅವರ ಸ್ನೇಹಿತರು ನಿರ್ಮಾಣ ಮಾಡಿದ್ದಾರೆ. 'ಚೂರಿಕಟ್ಟೆ' ಖ್ಯಾತಿಯ ಪ್ರವೀಣ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, 'ಗಜಾನನ ಅಂಡ್ ಗ್ಯಾಂಗ್' ಖ್ಯಾತಿಯ ಶ್ರೀಮಹಾದೇವ್, 'ಗಾಳಿಪಟ' ಚಿತ್ರ ಖ್ಯಾತಿಯ ಭಾವನಾ ರಾವ್ ಸೇರಿದಂತೆ ಹಲವು ನಟ-ನಟಿಯರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಗುಳ್ಟು' ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಶಾಂತಿ ಸಾಗರ್‌ ಈ ಚಿತ್ರದ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net