ರಾಮು-ಮಾಲಾಶ್ರೀ ಮಗಳು ಚಿತ್ರರಂಗಕ್ಕೆ; ರಾಕ್​ಲೈನ್ ನಿರ್ಮಾಣದ ಹೊಸ ಚಿತ್ರಕ್ಕೆ ರಾಧನಾ ನಾಯಕಿ..

Radhana
Published on

ಬೆಂಗಳೂರು: ರಾಮು-ಮಾಲಾಶ್ರೀ ದಂಪತಿಯ ಮಗಳು ಅನನ್ಯ ಇದೀಗ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶುಕ್ರವಾರ ಪ್ರಾರಂಭವಾದ ರಾಕ್​ಲೈನ್ ವೆಂಕಟೇಶ್ ನಿರ್ವಣದ ಹೊಸ ಚಿತ್ರದ ಮೂಲಕ ಅನನ್ಯ, ರಾಧನಾ ರಾಮ್ ಎಂಬ ಹೆಸರಿನಲ್ಲಿ ಪದಾರ್ಪಣೆ ಮಾಡಿದ್ದಾರೆ.

ರಾಧನಾಗೆ ಈ ಚಿತ್ರದಲ್ಲಿ ನಟಿಸುವುದಕ್ಕೆ ಬಹಳ ಅನಿರೀಕ್ಷಿತವಾಗಿ ಅವಕಾಶ ಸಿಕ್ಕಿತ್ತಂತೆ. ಈ ಕುರಿತು ಮಾತನಾಡುವ ಅವರು, ‘ಈ ಚಿತ್ರದಲ್ಲಿ ನಟಿಸುತ್ತಿರುವ ವಿಷಯವನ್ನು ಇನ್ನೂ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ನನಗೆ ನಟಿಸುವ ಆಸೆ ಇದೆ. ಚಿಕ್ಕವಳಿದ್ದಾಗ ಬಹಳ ನಾಚಿಕೆ ಇತ್ತು. ಎರಡು ವರ್ಷಗಳ ಕಾಲ ಸಾಕಷ್ಟು ತರಬೇತಿ ಪಡೆದು ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದೇನೆ. ಜತೆಗೆ ಚಿತ್ರಕ್ಕೆ ಸಂಬಂಧಿಸಿದ ವರ್ಕ್​ಶಾಪ್​ನಲ್ಲೂ ಭಾಗವಹಿಸುತ್ತಿದ್ದೇನೆ’ ಎನ್ನುತ್ತಾರೆ.

ನನಗೆ ಬದುಕು ಕೊಟ್ಟ ಚಿತ್ರರಂಗಕ್ಕೆ ಈಗ ನನ್ನ ಮಗಳು ಸಹ ಕಾಲಿಡುತ್ತಿದ್ದಾಳೆ ಎನ್ನುತ್ತಲೇ ಮಾತು ಪ್ರಾರಂಭಿಸುವ ಮಾಲಾಶ್ರೀ, ‘ನನಗೆ ಎಷ್ಟು ಪ್ರೀತಿ ತೋರಿಸಿದ್ದೀರೋ, ನನ್ನ ಮಗಳಿಗೆ ಅದಕ್ಕಿಂತ ಹೆಚ್ಚು ಪ್ರೀತಿ ತೋರಿಸಿ ಎಂದು ದುರಾಸೆಯಿಂದ ಕೇಳಿಕೊಳ್ಳುತ್ತೇನೆ’ ಎನ್ನುತ್ತಾರೆ. ನಾನು ‘ನಂಜುಂಡಿ ಕಲ್ಯಾಣ’ ಮಾಡಿದಾಗ 15 ವರ್ಷದವಳಾಗಿದ್ದೆ. ಅವಳಿಗೀಗ 21. ರಾಕ್​ಲೈನ್ ನನ್ನ ಸಿನಿಮಾ ಮೂಲಕ ಚಿತ್ರ ನಿರ್ಮಾಣ ಶುರು ಮಾಡಿದರು. ಈಗ ನನ್ನ ಮಗಳು ಅವರ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾಳೆ. ಒಂದೊಳ್ಳೆಯ ತಂಡದಿಂದ ಅವಳು ಚಿತ್ರರಂಗಕ್ಕೆ ಬರುತ್ತಿದ್ದಾಳೆ ಎಂಬ ಖುಷಿ ಇದೆ’ ಎನ್ನುತ್ತಾರೆ ಮಾಲಾಶ್ರೀ.

14ನೇ ವಯಸ್ಸಿನವರಿದ್ದಾಗ ಅಭಿನಯಿಸಬೇಕು ಎಂದು ಅನನ್ಯ ಆಸೆಪಟ್ಟರಂತೆ. ‘ಮೊದಲು ಫೋಟೋಶೂಟ್ ಮಾಡಿಸಿದೆ. ಫೋಟೋಜೆನಿಕ್ ಅಂತ ಗೊತ್ತಾದ ಮೇಲೆ, ಆಕೆ ಜತೆಗೆ ಮಾತನಾಡಿದೆ. ಅವಳಿಗೆ ನಟನೆ ಪ್ಯಾಶನ್ ಎಂದು ಗೊತ್ತಾಯಿತು. ಮುಂಬೈನಲ್ಲಿ ನಟನೆ, ಡ್ಯಾನ್ಸ್ ತರಬೇತಿ ಪಡೆದಿದ್ದಾಳೆ. ನಾಳೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡಾಗ, ಸಹಜವಾಗಿಯೇ ನನ್ನ ಮತ್ತು ಅವಳ ನಡುವೆ ಹೋಲಿಕೆಗಳು ಇರುತ್ತವೆ. ಆದರೆ, ಅವಳು ತನ್ನ ಹೆಸರಿನಿಂದ ಗುರುತಿಸಿಕೊಳ್ಳಬೇಕೇ ಹೊರತು, ನನ್ನ ಹೆಸರಿನಿಂದಲ್ಲ. ಹಾಗಾಗಿ, ಅದಕ್ಕೆ ಕಷ್ಟಪಡಬೇಕು. ಅದರಂತೆ ಸಾಕಷ್ಟು ಕಷ್ಟಪಡುತ್ತಿದ್ದಾಳೆ. ಅವಳು ತುಂಬಾ ನಾಚಿಕೆ ಸ್ವಭಾವದವಳು. ನಟಿಯಾಗಬೇಕು ಎಂದಾಗ, ಅವಳಿಂದ ಸಾಧ್ಯವಾ ಎಂದು ಆಶ್ಚರ್ಯವಾಗಿತ್ತು. ಈಗ ಅವಳು ನಟಿಸುತ್ತಿರುವುದು ಬಹಳ ಖುಷಿಯಾಗುತ್ತಿದೆ’ ಎನ್ನುತ್ತಾರೆ ಮಾಲಾಶ್ರೀ.

‘ರ’ ಸೆಂಟಿಮೆಂಟ್ ಅಲ್ಲ: ಇನ್ನು, ಅನನ್ಯ ಎಂಬ ಹೆಸರನ್ನು ರಾಧನಾ ರಾಮ್ ಎಂದು ಬದಲಾಯಿಸಿದ್ದಕ್ಕೆ ಕಾರಣ, ‘ರ’ ಸೆಂಟಿಮೆಂಟ್ ಇರಬಹುದಾ? ಎಂದರೆ, ಇಲ್ಲ ಎಂಬ ಉತ್ತರ ಬರುತ್ತದೆ. ‘ಚಿತ್ರರಂಗಕ್ಕೆ ಬಂದಾಗ ಹೆಸರು ಬದಲಾಯಿಸೋಣ ಎಂದು ಐಡಿಯಾ ಕೊಟ್ಟಿದ್ದೇ ರಾಮು. ಏನಾದರೂ ವಿಶೇಷವಾದ ಹೆಸರು ಬೇಕು ಎಂದು ರ್ಚಚಿಸಿದಾಗ, ಸಿಕ್ಕಿದ್ದೇ ಈ ಹೆಸರು. ಇದು ‘ರಾ’ ಸೆಂಟಿಮೆಂಟ್ ಅಲ್ಲ, ರಾಧನಾ ಎಂಬ ಹೆಸರು ಚೆನ್ನಾಗಿದೆ ಎಂಬ ಕಾರಣಕ್ಕೆ ಈ ಹೆಸರಿಡಲಾಗಿದೆ’ ಎಂದು ಮಾತು ಮುಗಿಸುತ್ತಾರೆ ಮಾಲಾಶ್ರೀ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net