

ಮುಂಬೈ: ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಬಾಲಿವುಡ್‌ನ ಅತ್ಯಂತ ಜನಪ್ರಿಯ ತಾರಾಜೋಡಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಬಾಲಿವುಡ್ ಮಾತ್ರವಲ್ಲದೆ, ದಕ್ಷಿಣ ಭಾರತ ಸಿನಿ ಅಭಿಮಾನಿಗಳಿಗೂ ಈ ಜೋಡಿ ಚಿರಪರಿಚಿತ. ಇದೀಗ ಈ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ತಾಜಾ ಸಂಗತಿ ಏನೆಂದರೆ, ದೀಪಿಕಾ ಮತ್ತು ರಣವೀರ್ ತಮ್ಮ ಜೀವನದ ಅತ್ಯಂತ ಸುಮಧುರ ಕ್ಷಣಗಳನ್ನು ಅಭಿಮಾನಿಗಳ ಬಳಿ ಹಂಚಿಕೊಂಡಿದ್ದಾರೆ. ದೀಪಿಕಾ ಅವರು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಇದಕ್ಕೆ ಪತಿ ರಣವೀರ್ ಕೂಡ ಸಾಥ್ ನೀಡಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಬಾಲಿವುಡ್‌ನ ಈ ಪವರ್ ಜೋಡಿ ತುಂಬಾ ಖುಷಿಯಾಗಿರುವುದನ್ನು ಫೋಟೋಗಳನ್ನು ಕಾಣಬಹುದು.
ಫೋಟೋಶೂಟ್‌ನಲ್ಲಿ ದೀಪಿಕಾ ವಿಭಿನ್ನ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ ದೀಪಿಕಾ ಜೀನ್ಸ್, ಲ್ಯಾಸಿ ಬ್ರಾ ಮತ್ತು ಕಾರ್ಡಿಜನ್ ಧರಿಸಿದ್ದರೆ, ಇತರ ಚಿತ್ರಗಳಲ್ಲಿ ಕಪ್ಪು ಪ್ಯಾಂಟ್‌ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಚಿತ್ರದಲ್ಲಿ ಸೀ-ಥ್ರೂ ಮ್ಯಾಕ್ಸಿ ಮತ್ತು ಕಪ್ಪು ಬಣ್ಣದ ಬಾಡಿಕಾನ್ ಡ್ರೆಸ್ ಧರಿಸಿದ್ದಾರೆ.
ಫೋಟೋ ನೋಡಿದ ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ಸ್ಟಾರ್ ಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಈ ಸ್ಟಾರ್ ದಂಪತಿ ಇದೇ ತಿಂಗಳು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ದೀಪಿಕಾ ಮತ್ತು ರಣವೀರ್ ಸುದೀರ್ಘ ಡೇಟಿಂಗ್ ನಂತರ 2018ರ ನವೆಂಬರ್ ತಿಂಗಳಲ್ಲಿ ವಿವಾಹವಾದರು.
ಕಳೆದ ಎರಡು ವರ್ಷಗಳಲ್ಲಿ ದೀಪಿಕಾ ನಟಿಸಿದ ನಾಲ್ಕು ಚಿತ್ರಗಳು ಒಟ್ಟು 3200 ಕೋಟಿ ರೂ.ಗೆ ಅಧಿಕ ಹಣ ಗಳಿಸಿವೆ. 2023 ರಲ್ಲಿ ತೆರೆಕಂಡ ಪಠಾಣ್ ಸಿನಿಮಾದೊಂದಿಗೆ ದೀಪಿಕಾ ಈ ವಿಜಯೋತ್ಸವವನ್ನು ಪ್ರಾರಂಭಿಸಿದರು. ಪಠಾಣ್ ವಿಶ್ವಾದ್ಯಂತ 1000 ಕೋಟಿಗೂ ಹೆಚ್ಚು ಗಳಿಸಿತು. ಇದು ದೀಪಿಕಾ ಅವರ ಮೊದಲ 1000 ಕೋಟಿ ಚಿತ್ರವಾಗಿದೆ. ಎರಡನೇ ಚಿತ್ರ ಜವಾನ್, ಪಠಾಣ್ಗಿಂತಲೂ ಒಳ್ಳೆಯ ಕಲೆಕ್ಸನ್ ಮಾಡಿತು. 1100 ಕೋಟಿ ರೂ.ಗೂ ಹೆಚ್ಚು ಗಳಿಸುವ ಮೂಲಕ ಜವಾನ್ ಸಿನಿಮಾ ದೀಪಿಕಾ ಅವರ ವೃತ್ತಿಜೀವನದ ಅತ್ಯುತ್ತಮ ಸಿನಿಮಾ ಆಗಿದೆ. (ಏಜೆನ್ಸೀಸ್)