BBK13: ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 13ರ ಘಟಾನುಘಟಿ ಸ್ಪರ್ಧಿಗಳ ಪೈಕಿ ಈ ವಾರ ತಾಂಡವ್ ರಾಮ್ ಮಿಡ್ವೀಕ್ ಎಲಿಮಿನೇಷನ್ನಲ್ಲಿ ಮನೆಯಿಂದ ಹೊರಬಂದಿರುವುದು ಸದ್ಯ ಬಿಗ್ ಬಾಸ್ ವೀಕ್ಷಕರಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ. ಮನೆಯೊಳಗೆ ಪ್ರವೇಶಿಸಿದ ಮೊದಲ ದಿನದಿಂದಲೂ ಆದಷ್ಟು ತಾಳ್ಮೆಯಿಂದಲೇ, ಎಲ್ಲರನ್ನು ಪ್ರೀತಿಯಿಂದಲೇ ಗೆಲ್ಲುವ ಗುಣ ಹೊಂದಿದ್ದ ಸ್ಪರ್ಧಿಯೇ ಎಲಿಮಿನೇಟ್ ಆಗಿದ್ದಾರೆ ಎಂಬುದನ್ನು ಕೆಲವರಿಂದ ಅರಗಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.
ಈ ವಾರ ಮೊದಲೇ ಹೇಳಿದಂತೆ ಮಿಡ್ ವೀಕ್ ಎಲಿಮಿನೇಷನ್ ವಾರದ ಮಧ್ಯೆ ಇರಲಿದೆ ಎಂಬುದು ಮನೆಯ ಸದಸ್ಯರಿಗೆ ಮುಂಚೆಯೇ ಗೊತ್ತಿತ್ತು. ಆದರೆ, ಟಾಸ್ಕ್ಗಳಲ್ಲಿ ಗೆದ್ದ ಧನುಷ್, ಆಸಿಯಾ, ಕಾವ್ಯ ಮತ್ತು ಕಿರಣ್ ಶಾಸ್ತ್ರಿಗೆ ತಮ್ಮನ್ನು ಬಿಟ್ಟು ಉಳಿದವರನ್ನು ನೇರವಾಗಿ ನಾಮಿನೇಟ್ ಮಾಡಬೇಕು ಎಂದು ಬಿಗ್ ಬಾಸ್ ತಿಳಿಸಿದ್ದರು. ಅಂತೆಯೇ, ಸೌಂದರ್ಯ, ತಾಂಡವ್, ಲಿಖಿತ್ ಮತ್ತು ಜಗ್ಗ ಅವರ ಪೈಕಿ ತಾಂಡವ್ ಎಲಿಮಿನೇಟೆಡ್ ಎಂದು ಕೆಂಪು ಬಣ್ಣದ ಕಾರ್ಡ್ನಲ್ಲಿ ಬರೆದಿದ್ದು ನೋಡಿ ಇಡೀ ಮನೆ ಮಂದಿ ಕೆಲ ನಿಮಿಷ ಗಪ್ಚುಪ್ ಆದರು. ಇದೇ ವೇಳೆ, ತಾಂಡವ್ ಜತೆ ಮೊದಲಿನಿಂದಲೂ ಬಹಳ ಆತ್ಮೀಯತೆ, ಒಳ್ಳೆಯ ಸ್ನೇಹದ ಒಡನಾಟ ಹೊಂದಿದ್ದ ಗಗನ್, ಪ್ರಕ್ರಿಯೆಗೂ ಮುನ್ನವೇ ಬಿಕ್ಕಿ ಬಿಕ್ಕಿ ಅತ್ತರು.
ಗೆಳೆಯ ತಾಂಡವ್ ಹೆಸರು ಎಲಿಮಿನೇಟ್ ಪಟ್ಟಿಯಲ್ಲಿ ಬರದಿರಲಿ, ಆತ ಸೇಫ್ ಆಗಿ ಮನೆಯೊಳಗೆ ವಾಪಾಸ್ ಬರಲಿ ಎಂದೇ ಗಗನ್ ಕಣ್ಣೀರಾಕುತ್ತಿದ್ದರು. ಆದರೆ, ಬ್ಯಾಡ್ ಲಕ್ ಎನ್ನುವಂತೆ ತಾಂಡವ್ ಅವರ ಹೆಸರೇ ಎಲಿಮಿನೇಟ್ ಆದವರು ಎಂದು ಬಂದಿದ್ದು ಗಗನ್ ದುಃಖಕ್ಕೆ ಕಾರಣವಾಯಿತು. ಈ ನಿರ್ಧಾರವನ್ನು ಒಪ್ಪಲು ಸಾಧ್ಯವಿಲ್ಲ ಬಿಗ್ ಬಾಸ್. ದಯವಿಟ್ಟು, ತಾಂಡವ್ನನ್ನು ಉಳಿಸಿಕೊಳ್ಳಿ ಎಂದು ಬೇಡಿಕೊಂಡಿದ್ದು ನೋಡುಗರ ಮನಕಲಕುವಂತಿತ್ತು. ಹಲವರು ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ಹೊರಹಾಕಿದ್ದಾರೆ. ಇನ್ನೂ ಕೆಲವರು ಗಗನ್-ತಾಂಡವ್ ಸ್ನೇಹವನ್ನು ಮೆಚ್ಚಿ ತಮಿಳಿನ ಸೂಪರ್ಹಿಟ್ ಸಿನಿಮಾದ ಪಾತ್ರಗಳಿಗೆ ಹೋಲಿಕೆ ಮಾಡಿದ್ದಾರೆ.
ಗಗನ್-ತಾಂಡವ್ ಇಬ್ಬರು ಒಟ್ಟಿಗೆ ಇರುವ ಒಂದು ಫೋಟೋ ನೋಡಿದ ಬಿಗ್ ಬಾಸ್ ವೀಕ್ಷಕರು ಅದನ್ನು ತಮಿಳಿನ ಬ್ಲಾಕ್ಬಸ್ಟರ್ ಹಿಟ್ ಹಾಗೂ ನೋಡುಗರ ಮನಗೆದ್ದ 'ಮೀಯಳಗನ್' ಚಿತ್ರದ ನಟರಾದ ಕಾರ್ತಿಕ್ ಮತ್ತು ಅರವಿಂದ್ ಸ್ವಾಮಿ ಜೋಡಿಯೊಂದಿಗೆ ಹೋಲಿಕೆ ಮಾಡಿದ್ದಾರೆ. ಕಾರಣ, ಈ ಸಿನಿಮಾದಲ್ಲಿ ಇವರಿಬ್ಬರ ಜೋಡಿ ಪ್ರೇಕ್ಷಕರಲ್ಲಿ ಕಣ್ಣೀರು ತರಿಸಿತ್ತು. ಇಬ್ಬರ ಸ್ನೇಹ ಮತ್ತು ಬಾಂಧವ್ಯ ನೋಡಿದಾಗ ಇದ್ದರೆ ಬದುಕಿನಲ್ಲಿ ಹೀಗಿರಬೇಕಪ್ಪ ಎಂದು ಅನೇಕರು ಭಾವಿಸಿದ್ದು ಉಂಟು. ಈಗ ಅದೇ ರೀತಿಯ ದೃಶ್ಯವನ್ನು ಬಿಗ್ ಬಾಸ್ ಸೀಸನ್ 13ರಲ್ಲಿ ತಾಂಡವ್ ಮತ್ತು ಗಗನ್ ಜೋಡಿ ನೋಡಿದವರಿಗೆ ಅನಿಸಿದ್ದು, ತಮ್ಮ ಅಭಿಪ್ರಾಯವನ್ನು ಜಾಲತಾಣಗಳಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.