

ಬೆಂಗಳೂರು: ಖ್ಯಾತ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರು ಬರೆದು ನಿರ್ದೇಶಿಸಿರುವ 'ಬಯಲಾಟದ ಭೀಮಣ್ಣ' ಚಿತ್ರವು ಬರ್ಲಿನ್ ಅಂತಾರಾಷ್ಟ್ರೀಯ ಆರ್ಟ್ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ.
ಬಯಲು ಸೀಮೆಯಲ್ಲಿ ಪ್ರಸಿದ್ಧವಾದ ಬಯಲಾಟದ ಕಲಾವಿದನನ್ನು ಕೇಂದ್ರವಾಗಿಟ್ಟುಕೊಂಡು ಗ್ರಾಮೀಣ ಕಲಾವಿದರ ಆಸೆ-ಆಕಾಂಕ್ಷೆ, ಸವಾಲುಗಳ ಸುತ್ತ ಈ ಸಿನಿಮಾ ಬೆಳಕು ಚೆಲ್ಲುತ್ತದೆ. ಕಲಾಭಿವ್ಯಕ್ತಿಗೆ ಒದಗುವ ಸರ್ವಾಧಿಕಾರಿ ಸವಾಲುಗಳನ್ನು ಎದುರಿಸುವ ಯುವ ಲೇಖಕನ ಪಾತ್ರದ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯನ್ನು ಈ ಚಿತ್ರದಲ್ಲಿ ಅಂತರ್ಗತ ಮಾಡಲಾಗಿದೆ.
2018ರ ಡಿಸೆಂಬರ್ನಲ್ಲೇ ಈ ಚಿತ್ರ ಸೆನ್ಸಾರ್ ಆಗಿ, ಬಿಡುಗಡೆಯಾಗುವುದಕ್ಕೆ ಸಜ್ಜಾಗಿತ್ತು. ಈ ಚಿತ್ರವನ್ನು ಮೊದಲಿಗೆ 'ಸಮುದಾಯದತ್ತ ಸಿನಿಮಾ' ಪರಿಕಲ್ಪನೆಯ 'ಚಿತ್ರಯಾತ್ರೆ' ಮೂಲಕ ನೂರಾರು ಊರುಗಳಲ್ಲಿ ಪ್ರದರ್ಶನ ಮಾಡಲಾಗಿತ್ತು. ಕರೊನಾ ನಂತರ ಚಿತ್ರದ ಅಧಿಕೃತ ಬಿಡುಗಡೆಗೆ ತಯಾರಿ ನಡೆಸಲಾಗಿದೆ.
ಭೀಮಣ್ಣನ ಪಾತ್ರದಲ್ಲಿ ಸುಂದರ್ರಾಜ್ ಅಭಿನಯಿಸಿದ್ದಾರೆ. ಜತೆಗೆ ರಂಜಿತ್, 'ಸ್ಪರ್ಶ' ರೇಖಾ, ಹನುಮಂತೇಗೌಡ, ಪ್ರಮೀಳಾ ಜೋಷಾಯ್, ರಾಧಾ ರಾಮಚಂದ್ರ, ವತ್ಸಲಾ ಮೋಹನ್, ಅಂಬರೀಶ್ ಸಾರಂಗಿ ಮುಂತಾದವರು ಚಿತ್ರದಲ್ಲಿ ನಟಿಸಿರುವ ಈ ಚಿತ್ರಕ್ಕೆ ಡಾ. ಶಮಿತಾ ಮಲ್ನಾಡ್ ಸಂಗೀತ ಸಂಯೋಜಿಸಿದ್ದಾರೆ. ಸಂಚಾರಿ ವಿಜಯ್ ಮತ್ತು ಸುಂದರ್ರಾಜ್ ಅವರು ಈ ಚಿತ್ರಕ್ಕಾಗಿ ತಲಾ ಒಂದೊಂದು ಹಾಡು ಹಾಡಿರುವುದು ವಿಶೇಷ.
ಈ ಚಿತ್ರವು ಬರಗೂರು ರಾಮಚಂದ್ರಪ್ಪ ಅವರ 'ಬಯಲಾಟದ ಭೀಮಣ್ಣ' ಎಂಬ ಕಥೆಯನ್ನು ಆಧರಿಸಿದ್ದು, ಬರಗೂರರೇ ಚಿತ್ರಕಥೆ, ಸಂಭಾಷನೆ ಹಾಗೂ ಹಾಡುಗಳನ್ನು ಬರೆದಿದ್ದಾರೆ.