

ಬಾಲಿವುಡ್ನ ಖ್ಯಾತ ನಿರ್ದೇಶಕ ಬಸು ಚಟರ್ಜಿ (93) ಇಂದು ಮಧ್ಯಾಹ್ನ ಮುಂಬೈನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರ ಸಾವಿಗೆ ಬಿಗ್ ಬಿ ಅಮಿತಾಭ್ ಬಚ್ಚನ್ ಆದಿಯಾಗಿ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಬಸು ಚಟರ್ಜಿ, ಬಾಲಿವುಡ್ನಲ್ಲಿ ಮಿಡ್ಲ್ ಕ್ಲಾಸ್ ಡಾರ್ಲಿಂಗ್ ಎಂದೇ ಜನಪ್ರಿಯರಾದವರು. ಕಾರಣ, ಅವರು ನಿರ್ದೇಶಿಸಿದ್ದು ಹೆಚ್ಚಾಗಿ ಮಧ್ಯಮ ವರ್ಗದ ಕಥೆಗಳೇ. ಮಧ್ಯಮ ವರ್ಗದ ಲವ್ಸ್ಟೋರಿಗಳನ್ನು ಬಹಳ ಸರಳವಾಗಿ ಮತ್ತು ಸುಂದರವಾಗಿ ತೆರೆಯ ಮೇಲೆ ತರುತ್ತಿದ್ದ ಬಸು ಚಟರ್ಜಿ ಪಿಯಾ ಕೆ ಘರ್ ಎಂಬ ಚಿತ್ರದ ಮೂಲಕ ಜನಪ್ರಿಯರಾದರು. ನಂತರದ ವರ್ಷಗಳಲ್ಲಿ ಅವರು ರಜನಿಗಂಧ, ಉಸ್ ಪಾರ್, ಚೋಟಿ ಸೀ ಬಾತ್, ಕಟ್ಟಾ ಮೀಟಾ, ಶೌಕೀನ್, ಚಮೇಲಿ ಕೀ ಶಾದಿ ಮುಂತಾದ ಹಲವು ಲಘು ಹಾಸ್ಯದ ಚಿತ್ರಗಳನ್ನು ನಿರ್ದೇಶನ ಮಾಡಿದರು.
ಬರೀ ಲಘು ಹಾಸ್ಯದ ಚಿತ್ರಗಳಷ್ಟೇ ಅಲ್ಲ, ಕೆಲವು ಗಂಭೀರ ಚಿತ್ರಗಳು ಸಹ ಅವರ ನಿರ್ದೇಶನದಲ್ಲಿ ಮೂಡಿಬಂದಿವೆ. ಈ ಪೈಕಿ ಪ್ರಮುಖವಾದುದು ಏಕ್ ರುಕಾ ಹುವಾ ಫೈಸ್ಲಾ. ಹಾಲಿವುಡ್ನ 12 ಆಂಗ್ರಿ ಮೆನ್ನಿಂದ ಸ್ಫೂರ್ತಿ ಪಡೆದಿದ್ದ ಈ ಚಿತ್ರದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಹಿಂದಿಯಲ್ಲದೆ, ಬಂಗಾಲಿಯಲ್ಲೂ ಅವರು ಕೆಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.
ಹಿರಿತೆರೆಗೆ ಚಿತ್ರ ನಿರ್ದೇಶಿಸುವುದರ ಜತೆಗೆ ಹಲವು ಧಾರಾವಾಹಿಗಳನ್ನು ಸಹ ನಿರ್ದೇಶಿಸಿದ್ದರು ಬಸು ಚಟರ್ಜಿ. ಈ ಪೈಕಿ ಪ್ರಮುಖವಾದದ್ದು, ದೂರದರ್ಶನದಲ್ಲಿ ಪ್ರಸಾರವಾದ ರಜನಿ. ಪ್ರಿಯಾ ತೆಂಡೂಲ್ಕರ್ ಅಭಿನಯದಲ್ಲಿ ಮೂಡಿ ಬಂದ ಈ ಧಾರಾವಾಹಿ, ದೂರದರ್ಶನದ ಆರಂಭದ ದಿನಗಳಲ್ಲಿ ಪ್ರಸಾರವಾಗುತಿತ್ತು. ಇದಲ್ಲದೆ ರಜತ್ ಕಪೂರ್ ಅಭಿನಯದ ಬ್ಯೋಮಕೇಶ ಬಕ್ಷಿ ಧಾರಾವಾಹಿಯನ್ನು ಸಹ ಅವರು ನಿರ್ದೇಶಿಸಿದ್ದರು.
ಹೀಗೆ 2011ರವರೆಗೂ ಸಕ್ರಿಯರಾಗಿ ಕೆಲಸ ಮಾಡಿದ್ದ ಬಸು ಚಟರ್ಜಿ, ಕಳೆದ ಕೆಲವು ವರ್ಷಗಳಿಂದ ವಯೋ ಸಹಜ ಸಮಸ್ಯೆಗಳಿಂದ ಬಳಲಿ, ಇಂದು ಕೊನೆಯುಸಿರೆಳೆದಿದ್ದಾರೆ. ಅಮಿತಾಭ್ ಬಚ್ಚನ್, ಅನಿಲ್ ಕಪೂರ್, ಶೂಜಿತ್ ಸರ್ಕಾರ್ ಸೇರಿದಂತೆ ಹಲವರು ಬಸು ಚಟರ್ಜಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.