11 ಭಾಷೆಗಳಿರುವ 'ಬನ್ನಿರಿ ಬೆಂಗಳೂರಿಗೆ ...' ಹಾಡು ಬಿಡುಗಡೆ

Made in Bangalore 2
Published on

ಬೆಂಗಳೂರು: ಬೆಂಗಳೂರಿನ ಕುರಿತು ಇದುವರೆಗೂ ಹಲವು ಹಾಡುಗಳು ಬಂದಿವೆ. ಈಗ ಅನಂತ್​ ನಾಗ್​, ಸಾಯಿಕುಮಾರ್​ ಮುಂತಾದವರು ಅಭಿನಯಿಸಿರುವ 'ಮೇಡ್​ ಇನ್​ ಬೆಂಗಳೂರು' ಚಿತ್ರದ 'ಬನ್ನಿರಿ ಬೆಂಗಳೂರಿಗೆ ...' ಎಂಬ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.

'ಮೇಡ್​ ಇನ್​ ಬೆಂಗಳೂರು' ಚಿತ್ರತಂಡವು ಇತ್ತೀಚೆಗೆ ಕಲಾವಿದರ ಸಂಘದಲ್ಲಿ ಅವಳಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ 'ಬನ್ನಿರೆ ಬೆಂಗಳೂರಿಗೆ ...' ಹಾಡನ್ನು ಹಿರಿಯ ನಿರ್ದೇಶಕ ಭಗವಾನ್​ ಬಿಡುಗಡೆ ಮಾಡಿದರೆ, ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್​ ಅವರು ಚಿತ್ರದ ಪೋಸ್ಟರ್​ ಬಿಡುಗಡೆ ಮಾಡಿದರು.

'ಬನ್ನಿರಿ ಬೆಂಗಳೂರಿಗೆ ...' ಹಾಡಿನ ವಿಶೇಷತೆಯೆಂದರೆ, ಈ ಹಾಡನ್ನು ಹನ್ನೊಂದು ಭಾಷೆಗಳನ್ನು ಬಳಸಿ ರಚಿಸಲಾಗಿದೆ. ಜನಪ್ರಿಯ ಗಾಯಕರಾದ ಶ್ರೀಹರ್ಷ ಎಂ.ಆರ್, ಕಂಬದ ರಂಗಯ್ಯ, ರೋಹಿತ್ ಭಟ್, ಮದ್ವೇಶ್ ಭಾರದ್ವಾಜ್, ಮೇಘ ಕುಲಕರ್ಣಿ, ಪೂಜಾ ರಾವ್, ನಾರಾಯಣ ಶರ್ಮ, ಅದಮ್ಯ ರಮಾನಂದ್, ನಿಹಾಲ್ ವಿಜೇತ್, ಆದರ್ಶ ಶೆಣೈ, ಪ್ರವೀಣ್ ಶಣ್ಮುಗ, ಅಥರ್ವ ರಾವ್, ಅಪ್ಪಣ್ಣ, ಅಶ್ವಿನ್ ಪ್ರಭಾತ್, ರಾಕೇಶ್ ಪೂಜಾರಿ ಮುಂತಾದವರು ಈ ಹಾಡನ್ನು ಹಾಡಿದ್ದು, ಅಶ್ವಿನ್ ಪಿ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ.

ಹಾಡು ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ನಿರ್ದೇಶಕ ಭಗವಾನ್​, 'ನಾವು ಚಿತ್ರ ನಿರ್ಮಾಣ ಮಾಡಬೇಕಾದರೆ ಇಷ್ಟು ಸುಲಭವಿರಲಿಲ್ಲ. ಈಗ ತಂತ್ರಜ್ಞಾನ ತುಂಬಾ ಮುಂದುವರೆದಿದೆ. ಹೊಸಬರ ತಂಡದಿಂದ ಹೊಸಚಿತ್ರವೊಂದು ನಿರ್ಮಾಣವಾಗಿದೆ. ರಾಯರ ಭಕ್ತರು ನಿರ್ಮಾಣ ಮಾಡಿದ್ದಾರೆ. ಇಡೀ ತಂಡಕ್ಕೆ ರಾಯರ ಕೃಪೆಯಿರಲಿ' ಎಂದು ಹಾರೈಸಿದರು.

ಮಧ್ಯಮವರ್ಗದ ಹುಡುಗನೊಬ್ಬ ಐಟಿ ಕಂಪನಿ ಕೆಲಸ ಬಿಟ್ಟು, ಹೊಸ ಕಂಪನಿ ಆರಂಭಿಸುತ್ತಾನೆ. ಅದಕ್ಕಾಗಿ ಹೂಡಿಕೆದಾರರನ್ನು ಹುಡುಕುತ್ತಾನೆ. ಸಿಗದಿದ್ದಾಗ ಗ್ಯಾಂಗ್​ಸ್ಟರ್ ಬಳಿ ಹಣ ಪಡೆಯುತ್ತಾನೆ. ಮುಂದೇನಾಗುತ್ತದೆ ಎಂಬುದೆ ಚಿತ್ರದ ಕಥೆ' ಎನ್ನುತ್ತಾರೆ ನಿರ್ದೇಶಕ ಪ್ರದೀಪ್ ಶಾಸ್ತ್ರಿ.

'ಮೇಡ್​ ಇನ್​ ಬೆಂಗಳೂರು' ಚಿತ್ರದಲ್ಲಿ ಮಧುಸೂದನ್ ಗೋವಿಂದ್, ಪುನೀತ್ ಮಾಂಜ ಹಾಗೂ ವಂಶಿಧರ್ ಮುಂತಾದವರು ಅಭಿನಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net