ವಿಕೆಟ್ ತೆಗೆದು 'ತಗ್ಗೆದೆ ಲೇ' ಎಂದ ಬಾಂಗ್ಲಾ ಬೌಲರ್: 'ಪುಷ್ಪ' ಹುಚ್ಚು, ಕ್ರಿಕೆಟಿಗರಲ್ಲಿ ಹೆಚ್ಚು! ವಿಡಿಯೋ ವೈರಲ್...

Published on
ಟಾಲಿವುಡ್​ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ 'ಪುಷ್ಪ: ದಿ ರೈಸ್' ಚಿತ್ರ ಕೇವಲ ಭಾರತದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಲ್ಲೂ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಈ ಪ್ಯಾನ್​ ಇಂಡಿಯಾ ಸಿನಿಮಾ ಬರೋಬ್ಬರಿ 350 ಕೋಟಿಗೂ ಹೆಚ್ಚು ಗಳಿಸಿದೆ. ಇನ್ನು, ಬಿಡುಗಡೆಯಾದ 20 ದಿನಕ್ಕೆ OTTಯಲ್ಲಿ ಕೂಡ ಸಿನಿಮಾ ಪ್ರಸಾರವಾಗುತ್ತಿದೆ. ಈ ಸಿನಿಮಾದ ಹಾಡುಗಳು ಮತ್ತು ಡೈಲಾಗ್​ಗಳಂತೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ.
ಈಗಾಗಲೇ, ಜನಸಾಮಾನ್ಯರ ಜತೆಗೆ ಹಲವು ಸೆಲೆಬ್ರಿಟಿಗಳು, ಕ್ರಿಕೆಟಿಗರು ಚಿತ್ರದ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದು ಮತ್ತು ಡೈಲಾಗ್​ಗಳನ್ನು ಅಲ್ಲು ಅವರ ಹಾಗೆ ಅನುಕರಿಸುತ್ತಿದ್ದಾರೆ. ಸದ್ಯ, ಬಾಂಗ್ಲಾದೇಶದಲ್ಲಿ ಬಾಂಗ್ಲಾ ಪ್ರೀಮಿಯರ್ ಲೀಗ್​ಗೆ ಎರಡು ದಿನಗಳ ಹಿಂದೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಭಾನುವಾರದಂದು ಪಂದ್ಯದಲ್ಲಿ ವಿಕೆಟ್ ತೆಗೆದ ಬಾಂಗ್ಲಾ ಬೌಲರ್ ಕೂಡ 'ಪುಷ್ಪ' ಚಿತ್ರದಲ್ಲಿ 'ತಗ್ಗೆದೆ ಲೇ' ಡೈಲಾಗ್ ಹೊಡೆದಾಗ ಅಲ್ಲು ಅರ್ಜುನ್​ ಮಾಡುವ ಆ್ಯಕ್ಷನ್ ಅನ್ನು ಮಾಡಿ 'ತಗ್ಗೆದೆ ಲೇ' ಎಂದು ಸಂಭ್ರಮಿಸಿದ್ದಾರೆ.
ಈ ಮೂಲಕ ಬಾಂಗ್ಲಾ ಪ್ರೀಮಿಯರ್ ಲೀಗ್ (BPL) ನಲ್ಲೂ ಪುಷ್ಪ ಸಿನಿಮಾದೆ ಟ್ರೆಂಡ್ ಎಂದು ಸಾಬೀತಾಗಿದೆ. ಹೌದು, BPL ಲೀಗ್​ನ ಭಾನುವಾರ ನಡೆದ ಪಂದ್ಯದಲ್ಲಿ ವಿಕೆಟ್ ಕಿತ್ತಾಗ ಬಾಂಗ್ಲಾ ಬೌಲರ್ ಚಿತ್ರದಲ್ಲಿನ ‘ತಗ್ಗೆದೆ ಲೇ’ ಡೈಲಾಗ್ ಹೊಡೆದಾಗ ಅಲ್ಲು ಅರ್ಜುನ್​ನ ಆ್ಯಕ್ಷನ್ ಅನ್ನು ಅನುಕರಿಸುವ ಮೂಲಕ ನಿಜಕ್ಕೂ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 22,000 ವೀಕ್ಷಣೆಗಳನ್ನು ಗಿಟ್ಟಿಸಿಕೊಂಡಿರುವ ಈ ವಿಡಿಯೋ ಟ್ವಿಟರ್​ನಲ್ಲಿ ಭಾರೀ ಗಮನ ಸೆಳೆಯುತ್ತಿದೆ.
ಅಲ್ಲು ಅರ್ಜುನ್ ಅಭಿಮಾನಿಗಳ ಸಂತಸಕ್ಕೂ ಈ ವಿಡಿಯೋ ಕಾರಣವಾಗಿದೆ. ಈ ಹಿಂದೆ ಪುಷ್ಪ ಚಿತ್ರದ ‘ತಗ್ಗೆದೆ ಲೇ’ ಡೈಲಾಗಿಗೆ ಡೇವಿಡ್ ವಾರ್ನರ್ ವಿಡಿಯೋ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. ಹಾಗೂ, ಇದಕ್ಕೂ ಮುನ್ನ ಇದೇ ಸಂಭಾಷಣೆಗೆ ರವೀಂದ್ರ ಜಡೇಜಾ ಕೂಡ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇವರೆಲ್ಲರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿ, ಸುದ್ದಿಯಲ್ಲಿದ್ದವು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net