

ಬೆಂಗಳೂರು: ಝೈದ್ ಖಾನ್ ಮತ್ತು ಸೋನಲ್ ಮಾಂತೇರೋ ನಾಯಕ-ನಾಯಕಿಯಾಗಿ ಅಭಿನಯಿಸಿರುವ 'ಬನಾರಸ್' ಚಿತ್ರವು ನವೆಂಬರ್ 4ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಪ್ರತಿಷ್ಠಿತ ಸಂಸ್ಥೆಗಳು ಈ ಚಿತ್ರದ ವಿತರಣೆ ಹಕ್ಕುಗಳನ್ನು ಖರೀದಿಸುತ್ತಿವೆ.
'ಬನಾರಸ್' ಚಿತ್ರದ ವಿಶಾಲ ಕರ್ನಾಟಕ ವಿತರಣಾ ಹಕ್ಕನ್ನು ಡಿ ಬೀಟ್ಸ್ ಪಡೆದುಕೊಂಡಿದೆ. ಶೈಲಜಾ ನಾಗ್ ಮತ್ತು ಬಿ ಸುರೇಶ್ ಸಾರಥ್ಯದ ಡಿ ಬೀಟ್ಸ್ ಸಂಸ್ಥೆಯು ವ್ಯವಸ್ಥಿತವಾಗಿ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲಿದೆ. ಅದಕ್ಕೆ ಸರಿಯಾಗಿ 'ಬನಾರಸ್' ಬಿಡುಗಡೆಗೆ ಪ್ಲಾನು ಮಾಡಿಕೊಳ್ಳಲಾಗಿದೆ. ಇನ್ನು, ಕೇರಳದಲ್ಲಿ ಪ್ರಖ್ಯಾತ ವಿತರಣಾ ಸಂಸ್ಥೆಯಾಗಿರುವ ಮಲಕುಪ್ಪಡಮ್ ಫಿಲಂಸ್ ಸಂಸ್ಥೆಯು, ಬನಾರಸ್‌ನ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಈ ವಿಚಾರವನ್ನು ಖುದ್ದು ಆ ಸಂಸ್ಥೆಯೇ ಅಧಿಕೃತವಾಗಿ ಘೋಷಿಸಿಕೊಂಡಿದೆ.
ಕನ್ನಡ ಮತ್ತು ಮಲಯಾಳಂ ಅವತರಣಿಕೆಗಳ ವಿತರಣಾ ಹಕ್ಕುಗಳಲ್ಲದೆ, ಬನಾರಸ್ ಚಿತ್ರದ ಹಿಂದಿ ಅವತರಣಿಕೆಯ ಹಕ್ಕುಗಳು ಸಹ ಇದೀಗ ಮಾರಾಟವಾಗಿದೆ. ಉತ್ತರ ಭಾರತದ ಉದ್ದಗಲಕ್ಕೂ ಬನಾರಸ್ ಹಿಂದಿ ಡಿಸ್ಟ್ರಿಬ್ಯೂಷನ್ ಜವಾಬ್ದಾರಿಯನ್ನು ಅಜಯ್ ದೇವಗನ್ ಸಾರಥ್ಯದ ಪನೋರಮಾ ಸ್ಟುಡಿಯೋಸ್ ವಹಿಸಿಕೊಂಡಿದೆ. ಇದರೊಂದಿಗೆ ಚಿತ್ರಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇರೆಯದೇ ಬಲ ಬಂದಂತಾಗಿದೆ!
'ಬನಾರಸ್' ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆಯೇ, ಝೈದ್ ಖಾನ್ ಮತ್ತು ಸೋನಲ್ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ, ಇಬ್ಬರೂ ಮುಂಬೈಗೆ ಹೋಗಿ ಅಲ್ಲಿ ಚಿತ್ರದ ಪ್ರಚಾರ ಮಾಡಿ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜ್ಯಗಳಿಗೆ ಅವರು ಭೇಟಿ ನೀಡಿ, 'ಬನಾರಸ್' ಬಗ್ಗೆ ಪ್ರಚಾರ ಮಾಡಲಿದ್ದಾರೆ.
'ಬನಾರಸ್' ಚಿತ್ರವನ್ನು ತಿಲಕ್ರಾಜ್ ಭಲ್ಲಾಳ್ ನಿರ್ಮಿಸಿದ್ದು ಜಯತೀರ್ಥ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ ಮುಂತಾದವರು ನಟಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.