ಚಾಮರಾಜನಗರದಲ್ಲಿ ಬೈರಾಗಿ ಪ್ರಿ-ರಿಲೀಸ್ ಕಾರ್ಯಕ್ರಮ

Bairaagi
Published on

ಬೆಂಗಳೂರು: ಶಿವರಾಜಕುಮಾರ್ ಮತ್ತು ಧನಂಜಯ್ ಅಭಿನಯದಲ್ಲಿ ವಿಜಯ್ ಮಿಲ್ಟನ್ ನಿರ್ದೇಶಿಸಿರುವ ‘ಬೈರಾಗಿ’ ಚಿತ್ರದ ಟೀಸರ್ ಬಿಡುಗಡೆಯಾಗಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇದೇ ಜುಲೈ 1 ರಂದು ಸಿನಿಮಾ ತೆರೆಗೆ ಬರಲಿದ್ದು, ಚಿತ್ರತಂಡ ಸಾಕಷ್ಟು ತಯಾರಿ ನಡೆಸಿದೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ವಪಕ ಕೃಷ್ಣ ಸಾರ್ಥಕ್, ‘ಚಿತ್ರದ ಕೆಲಸಗಳು ಬಹುತೇಕ ಮುಗಿದಿದ್ದು, ಇನ್ನೆರಡು, ಮೂರು ದಿನಗಳಲ್ಲಿ ಮೊದಲ ಪ್ರತಿ ಬರಲಿದೆ. ಚಾಮರಾಜನಗರದಲ್ಲಿ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ನಡೆಸುವ ಆಲೋಚನೆಯಿದೆ. ಸುಮಾರು 350 ಸ್ಕ್ರೀನ್​ಗಳಲ್ಲಿ ಸಿನಿಮಾ ರಿಲೀಸ್ ಮಾಡಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ. ಶಿವರಾಜಕುಮಾರ್ ಮತ್ತು ಧನಂಜಯ ಅವರನ್ನು ಮತ್ತೆ ಒಂದೇ ಸಿನಿಮಾಗೆ ಕರೆತರಲು ಹಲವು ತಂಡಗಳು ಪ್ರಯತ್ನಿಸಿದ್ದವಂತೆ. ಶಿವರಾಜಕುಮಾರ್ ಅವರೂ ಸುಮಾರು 25 ಕಥೆಗಳನ್ನು ಕೇಳಿದ್ದರಂತೆ. ಆದರೆ, ಅವರು ಯಾವುದನ್ನೂ ಒಪ್ಪಿರಲಿಲ್ಲ. ‘‘ಬೈರಾಗಿ’ ಕಥೆ ಕೇಳಿ ಶಿವಣ್ಣ ಒಪ್ಪಿಕೊಂಡರು. ಧನಂಜಯ್ ಬಳಿ ಹೇಳುತ್ತಿದ್ದಂತೆ, ಶಿವಣ್ಣ ಓಕೆ ಅಂದರೆ ನನಗೂ ಓಕೆ ಅಂತ ಖುಷಿಯಿಂದ ಒಪ್ಪಿದರು. ಶಿವಣ್ಣ ಡೇಟ್ಸ್​ಗೆ ಅನುಗುಣವಾಗಿ ತಾವೂ ಡೇಟ್ಸ್ ಹೊಂದಿಸಿಕೊಂಡು ಚಿತ್ರೀಕರಣಕ್ಕೆ ಬಂದರು’ ಎಂದು ‘ಟಗರು’ ಜೋಡಿಯನ್ನು ಮತ್ತೆ ‘ಬೈರಾಗಿ’ ಮೂಲಕ ಒಟ್ಟಿಗೆ ಕರೆತಂದ ಬಗ್ಗೆ ಹೇಳಿಕೊಳ್ಳುತ್ತಾರೆ ಕೃಷ್ಣ.

ಇನ್ನು, ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡುತ್ತಿರುವ ಸಿಂಗಲ್ ಟೇಕ್ ಹಾಡು, ‘ರಿದಮ್ ಆಫ್ ಶಿವಪ್ಪ’ದ ಚಿತ್ರೀಕರಣ ಕಳೆದ ನವೆಂಬರ್ ಮೊದಲ ವಾರ ನಡೆಯಬೇಕಿತ್ತಂತೆ. ‘ಆದರೆ, ಅಪು್ಪ ಸರ್ ಅಕ್ಟೋಬರ್ 29ರಂದು ನಮ್ಮಿಂದ ದೂರಾದರು. ಹೀಗಾಗಿ ಆಗ ಚಿತ್ರೀಕರಣ ನಡೆಸಲು ಸಾಧ್ಯವಾಗಲಿಲ್ಲ. ದೇವನಹಳ್ಳಿಯ ಒಂದು ಗ್ಯಾರೇಜ್​ನಲ್ಲಿ ಸೆಟ್ ಹಾಕಿ ಸುಮ್ಮನಾಗಿಬಿಟ್ಟಿದ್ದೆವು. ಡಿಸೆಂಬರ್ ಕೊನೆಯಲ್ಲಿ ಖುದ್ದು ಶಿವಣ್ಣ ನನಗೆ ಕರೆ ಮಾಡಿ, ಚಿತ್ರೀಕರಣ ತಡವಾಗುತ್ತಿರುವ ಕಾರಣ ನಷ್ಟವಾಗಿದೆಯಾ? ಆದಷ್ಟು ಬೇಗ ಹಾಡನ್ನು ಮಾಡೋಣ ಎಂದರು. ಶಿವಣ್ಣ ಮತ್ತು ಅಪು್ಪ ಸರ್ ಆ ಹಾಡನ್ನು ಹಾಡಬೇಕಿತ್ತು. ನಮ್ಮ ಚಿತ್ರದ ಒಂದು ಭಾಗವಾಗಿದ್ದರು ಅಪು್ಪ ಸರ್’ ಎಂದು ನೆನಪಿಸಿಕೊಳ್ಳುತ್ತಾರೆ ಕೃಷ್ಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net