ಮ್ಯಾಜಿಕ್ ಮಾಡಿದ ತಂಡಕ್ಕೆ ದೊಡ್ಡ ಸಲಾಂ ... ಹಾಗಂತ ಪ್ರಭಾಸ್ ಹೇಳಿದ್ಯಾಕೆ?

Final - Bahubali
Published on

ಪ್ರಭಾಸ್ ವೃತ್ತಿಜೀವನದ ಮಹತ್ವದ ಚಿತ್ರ ಎಂದರೆ ಅದು ರಾಜಮೌಳಿ ನಿರ್ದೇಶನದ `ಬಾಹುಬಲಿ'. ಈ ಚಿತ್ರದಿಂದ ಅವರು ದೊಡ್ಡ ಯಶಸ್ಸು ಕಂಡಿದ್ದಷ್ಟೇ ಅಲ್ಲ, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು. ಈಗ ಪ್ರಭಾಸ್ ತಮಗೆ ಮರುಜನ್ಮ ನೀಡಿದ ಚಿತ್ರವನ್ನು ನೆನಪಿಸಿಕೊಂಡಿದ್ದಾರೆ.

ಈಗ್ಯಾಕೆ ಪ್ರಭಾಸ್ ತಮ್ಮ ಹಳೆಯ ಚಿತ್ರವನ್ನು ನೆನಪಿಸಿಕೊಂಡರು ಎಂಬ ಪ್ರಶ್ನೆ ಬರುವುದು ಸಹಜ. ಅದಕ್ಕೆ ಉತ್ತರವೂ ಇದೆ. `ಬಾಹುಬಲಿ' ಸೀರೀಸ್‍ನ ಮೊದಲ ಚಿತ್ರವಾದ `ಬಾಹುಬಲಿ - ದಿ ಬಿಗಿನಿಂಗ್' ಚಿತ್ರ ಬಿಡುಗಡೆಯಾಗಿ ಇಂದು ಐದು ವರ್ಷಗಳಾಗಿವೆ. ಚಿತ್ರಕ್ಕೆ ಐದು ವರ್ಷ ಸಂದ ಸಂದರ್ಭದಲ್ಲಿ ಪ್ರಭಾಸ್, ಚಿತ್ರವನ್ನು ನೆನಪಿಸಿಕೊಳ್ಳುವುದರ ಜತೆಗೆ, ಸೋಷಿಯಲ್ ಮೀಡಿಯಾದಲ್ಲಿ ಆ ಚಿತ್ರದ ಒಂದು ಫೋಟೋ ಸಹ ಶೇರ್ ಮಾಡಿದ್ದಾರೆ. ಮ್ಯಾಜಿಕ್ ಮಾಡಿದ ತಂಡಕ್ಕೆ ದೊಡ್ಡ ಸಲಾಂ ಎಂದು ಹೇಳಿದ್ದಾರೆ.

ರಾಜಮೌಳಿ ನಿರ್ದೇಶನದ `ಬಾಹುಬಲಿ - ದಿ ಬಿಗಿನಿಂಗ್' ಚಿತ್ರವು 2015ರಲ್ಲಿ ಬಿಡುಗಡೆಯಾಗಿತ್ತು. ತೆಲುಗಿನಲ್ಲಿ ನಿರ್ಮಾಣವಾದ ಈ ಚಿತ್ರ, ನಂತರ ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಡಬ್ ಆಗಿ ಪ್ಯಾನ್ ಇಂಡಿಯಾ ಬಿಡುಗಡೆಯಾಗಿತ್ತು. ಅಷ್ಟೇ ಅಲ್ಲ, ಎಲ್ಲಾ ಭಾಷೆಗಳಲ್ಲೂ ಹಳೆಯ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಪುಡಿ ಮಾಡಿತ್ತು.

2015ರ ಜುಲೈ 10ರಂದು ಬಿಡುಗಡೆಯಾದ ಚಿತ್ರ, ಭಾರತದಲ್ಲೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಜತೆಗೆ ಬೇರೆ ದೇಶಗಳಲ್ಲೂ ಬಿಡುಗಡೆಯಾಗಿ, ಅತೀ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಮೂರನೆಯ ಚಿತ್ರ ಎಂಬ ಖ್ಯಾತಿಗೆ `ಬಾಹುಬಲಿ' ಪಾತ್ರವಾಯಿತು. ಈ ಚಿತ್ರ ಇದೀಗ ಐದು ವರ್ಷ ಪೂರೈಸಿದೆ.

ಪ್ರಭಾಸ್ ಪಾಲಿಗೆ ಇಂದು ಖುಷಿಪಡುವುದಕ್ಕೆ ಇನ್ನೊಂದು ಕಾರಣವೂ ಇದೆ. `ಬಾಹುಬಲಿ' ಬಿಡುಗಡೆಯಾಗಿ ಐದು ವರ್ಷಗಳಾದರೆ, ಅವರ ಹೊಸ ಚಿತ್ರ `ರಾಧೇ ಶ್ಯಾಮ್'ನ ಫಸ್ಟ್ ಲುಕ್ ಪೋಸ್ಟರ್ ಇವತ್ತಷ್ಟೇ ಬಿಡುಗಡೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net