

ಮುಂಬೈ: ದಿವಂಗತ ನಟ ಇರ್ಫಾನ್ ಖಾನ್ ಅವರ ಮಗ ಬಾಬಿಲ್ ಖಾನ್ ಈಗಾಗಲೇ 'ಖಲಾ' ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಗೊತ್ತೇ ಇದೆ. ಅನೂಷ್ಕಾ ಶರ್ಮಾ ನಿರ್ಮಾಣದ 'ಖಲಾ' ಚಿತ್ರದ ಚಿತ್ರೀಕರಣ, ಈಗಾಗಲೇ ಪ್ರಾರಂಭವಾಗಿದ್ದು ಒಂದು ಹಂತದ ಚಿತ್ರೀಕರಣ ಸಹ ಮುಗಿದಿದೆ.
ಈಗ ಅದೇ ಬಾಬಿಲ್ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಹಿಂದೆ ಇರ್ಫಾನ್ ಖಾನ್ ಅಭಿನಯದ 'ಪೀಕು' ಚಿತ್ರವನ್ನು ನಿರ್ದೇಶಿಸಿದ್ದ ಶೂಜಿತ್ ಸರ್ಕಾರ್, ಈಗ ಇರ್ಫಾನ್ ಅವರ ಮಗ ಬಾಬಿಲ್ ಅವರನ್ನು ಹೊಸ ಚಿತ್ರದಲ್ಲಿ ನಿರ್ದೇಶನ ಮಾಡುತ್ತಿದ್ದಾರೆ.
ಶೂಜಿತ್ ಸರ್ಕಾರ್ ನಿರ್ದೇಶನದ ಈ ಚಿತ್ರದ ಹೆಸರೇನು, ವಿಶೇಷತೆ ಏನು ಎಂಬುದನ್ನು ಇನ್ನೂ ಬಹಿರಂಗವಾಗಿಲ್ಲ. 'ಪೀಕು' ಚಿತ್ರವನ್ನು ನಿರ್ಮಿಸಿದ್ದ ರಾನ್ನಿ ಮತ್ತು ಶೀಲ್ ಕುಮಾರ್ ಅವರ ರೈಸಿಂಗ್ ಸನ್ ಫಿಲಂಸ್ ಪ್ರೊಡಕ್ಷನ್ ಸಂಸ್ಥೆ ನಿರ್ಮಿಸುತ್ತಿದೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ನಿರ್ಮಾಪಕ ರಾನ್ನಿ, 'ಈ ಹಿಂದೆ ಇರ್ಫಾನ್ ಅವರ ಜತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಈಗ ಅವರ ಮಗನ ಜತೆಗೆ ನಟಿಸುವ ಅವಕಾಶ ಸಿಕ್ಕಿದೆ' ಎಂದು ಹೇಳಿದ್ದಾರೆ.