ಕರೊನಾ ಎಫೆಕ್ಟ್​: ತರಕಾರಿ ಮಾರ್ತಿದ್ದಾರೆ 'ಬಾಲಿಕಾ ವಧು' ನಿರ್ದೇಶಕರು

Baalika Vadhu - Final
Published on

ಮುಂಬೈ: ಕರೊನಾ ಮತ್ತು ಲಾಕ್​ಡೌನ್​ನಿಂದ ಅದೆಷ್ಟೋ ಜನ ಕೆಲಸ ಕಳೆದುಕೊಂಡು ಮನೆಯಲ್ಲಿರಬೇಕಾದ ಪರಿಸ್ಥಿತಿ ಇದೆ. ಚಿತ್ರರಂಗದಲ್ಲಂತೂ ಈ ಪ್ರಮಾಣ ಬಹಳ ದೊಡ್ಡದಿದ್ದು, ಕೆಲಸ ಕಳೆದುಕೊಂಡಿರುವ ಹಲವು ಕಲಾವಿದರು ಮತ್ತು ತಂತ್ರಜ್ಱರು ಇದೀಗ ಬೇರೆ ಕೆಲಸಗಳ ಮೊರೆ ಹೋಗಿದ್ದಾರೆ.

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬಾಲಿಕಾ ವಧು' ಎಂಬ ಜನಪ್ರಿಯ ಧಾರಾವಾಹಿಯಲ್ಲಿ ಸೆಕೆಂಡ್​ ಯೂನಿಟ್​ ನಿರ್ದೇಶಕರಾಗಿರುವ ರಾಮ್​ ವೃಕ್ಷ ಗೌರ್​ ಸಹ ಈಗ ಕೆಲಸ ಕಳೆದುಕೊಂಡಿದ್ದು, ಈಗ ತಮ್ಮೂರಲ್ಲಿ ತರಕಾರಿ ಮಾರುತ್ತಿದ್ದಾರೆ.

ಇತ್ತೀಚೆಗೆ ರಾಮ್​ ವೃಕ್ಷ ಗೌರ್​ ಅವರು ತಳ್ಳುವ ಗಾಡಿಯಲ್ಲಿ ತರಕಾರಿ ಮಾರುತ್ತಿರುವ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​ ಆಗಿವೆ.

ನಿರ್ದೇಶನ ಬಿಟ್ಟು ತರಕಾರಿ ಮಾರುತ್ತಿರುವ ಬಗ್ಗೆ ಮಾತನಾಡಿರುವ ಗೌರ್​, 'ನಾನು ಅಜಂಗಢಕ್ಕೆ ಲೊಕೇಶನ್​ ಹುಡುಕುವುದಕ್ಕೆ ಬಂದಿದ್ದೆ. ಇಲ್ಲಿರುವಾಗಲೇ ಲಾಕ್​ಡೌನ್​ ಘೋಷಣೆಯಾಗಿದೆ. ಇದರಿಂದ ಆ ಧಾರಾವಾಹಿ ನಿಂತು ಹೋಗಿದ್ದಷ್ಟೇ ಅಲ್ಲ, ಇನ್ನೊಂದು ವರ್ಷ ಶುರುವಾಗುವುದು ಸಂಶಯ ಎಂದು ನಿರ್ಮಾಪಕರೇ ಹೇಳಿದ್ದಾರೆ. ಹೀಗಿರುವಾಗ ಹೊಟ್ಟೆಪಾಡು ನಡೆಯಬೇಕಲ್ಲಾ? ಅದೇ ಕಾರಣಕ್ಕೆ ತರಕಾರಿ ಮಾರುತ್ತಿದ್ದೇನೆ' ಎಂದು ಅವರು ಹೇಳಿಕೊಂಡಿದ್ದಾರೆ.

ಗೌರ್​ಗೆ ತರಕಾರಿ ಬಿಜಿನೆಸ್​ ಹೊಸದಲ್ಲವಂತೆ. ಅವರ ತಂದೆ ಸಹ ತರಕಾರಿ ಮಾರುತ್ತಿದ್ದು, ಈ ವ್ಯಾಪಾರವನ್ನು ಬಹಳ ಹತ್ತಿರದಿಂದ ನೋಡಿ ಗೊತ್ತಿರುವುದರಿಂದ, ಗೌರ್​ ಸಹ ತರಕಾರಿ ವ್ಯಾಪಾರ ಶುರು ಮಾಡಿದ್ದಾರೆ. ಧಾರಾವಾಹಿಯ ಕೆಲಸಗಳೆಲ್ಲಾ ಶುರುವಾದ ಮೇಲೆ, ವಾಪಸ್ಸು ಮುಂಬೈಗೆ ಹೋದರಾಯಿತು ಎಂದು ಗೌರ್​ ಇದೀಗ ತರಕಾರಿ ಮಾರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net