

ಕಳೆದ ಒಂದಿಷ್ಟು ದಿನಗಳಲ್ಲಿ, ಕನ್ನಡದ ಕೆಲವು ಬಹುನಿರೀಕ್ಷಿತ ಚಿತ್ರಗಳ ಬಿಡುಗಡೆ ಘೋಷಣೆಯಾಗಿವೆ. ಆದರೆ, ಈ ಪಟ್ಟಿಯಲ್ಲಿ ಶರಣ್ ಅಭಿನಯದ ‘ಅವತಾರ ಪುರುಷ’ ಕಂಡಿರಲಿಲ್ಲ. ಈಗ ಈ ಚಿತ್ರದ ಕೆಲಸಗಳು ಮುಗಿಯುತ್ತಾ ಬಂದಿದ್ದು, ನ. 26ಕ್ಕೆ ಬಿಡುಗಡೆ ಆಗಲಿದೆ ಎಂದು ನಿರ್ವಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ತಿಳಿಸಿದ್ದಾರೆ.
ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ಮುಂಚೆ ಚಿತ್ರವನ್ನು ನ.19ರಂದು ಬಿಡುಗಡೆ ಮಾಡುವ ಯೋಚನೆ ಇತ್ತು. ಸುನಿ ನಿರ್ದೇಶನದ ‘ಸಖತ್’ ಚಿತ್ರ ನ.12ಕ್ಕೆ ಬರುವ ಸಾಧ್ಯತೆ ಇದೆ. ‘ಅವತಾರ್ ಪುರುಷ’ ಚಿತ್ರವನ್ನೂ ಅವರೇ ನಿರ್ದೇಶಿಸಿರುವುದಿಂದ, ಎರಡೂ ಚಿತ್ರಗಳ ಮಧ್ಯೆ ಕನಿಷ್ಠ ಎರಡು ವಾರಗಳ ಗ್ಯಾಪ್ ಇರಲಿ ಎಂದು ನ. 26ಕ್ಕೆ ಬಿಡುಗಡೆ ಮಾಡುವ ಬಗ್ಗೆ ತಯಾರಿ ನಡೆಸಿದ್ದೇವೆ’ ಎನ್ನುತ್ತಾರೆ ಪುಷ್ಕರ್. ಈಗಾಗಲೇ ಗೊತ್ತಿರುವಂತೆ, ‘ಅವತಾರ ಪುರುಷ’ ಚಿತ್ರವು ಎರಡು ಭಾಗಗಳಲ್ಲಿ ನಿರ್ವಣವಾಗಿದೆ. ಈ ಎರಡು ಭಾಗಗಳ ಮಧ್ಯೆ ಮೂರು ತಿಂಗಳ ಅಂತರ ಇರಲಿದೆಯಂತೆ. ಮೊದಲ ಭಾಗ ನವೆಂಬರ್ ಕೊನೆಗೆ ಬಂದರೆ, ಮುಂದುವರೆದ ಭಾಗ ಫೆಬ್ರವರಿ ಕೊನೆಯಲ್ಲಿ ಬಿಡುಗಡೆಯಾಗಲಿದೆ.
‘ಈ ಮೂರು ತಿಂಗಳ ಅಂತರದಲ್ಲಿ ಚಿತ್ರವನ್ನು ಎಲ್ಲ ಫಾರ್ವಟ್ನಲ್ಲೂ ಬಿಡುಗಡೆ ಮಾಡುವ ಯೋಚನೆ ಇದೆ. ಮೊದಲು ಚಿತ್ರಮಂದಿರ, ಆ ನಂತರ ಒಟಿಟಿ ಮತ್ತು ಟಿವಿ ಚಾನಲ್ಗಳಲ್ಲೂ ಚಿತ್ರ ಬಿಡುಗಡೆಯಾಗಲಿದೆ. ಒಂದಲ್ಲ ಒಂದು ವೇದಿಕೆಯಲ್ಲಿ ಜನ ಚಿತ್ರ ನೋಡಿರುವುದರಿಂದ, ಮುಂದುವರೆದ ಭಾಗಕ್ಕೆ ನಿರೀಕ್ಷೆ, ಆಕರ್ಷಣೆ ಎರಡೂ ಇರುತ್ತದೆ’ ಎನ್ನುತ್ತಾರೆ ಪುಷ್ಕರ್.