

ಬೆಂಗಳೂರು: 1985ರಲ್ಲಿ ಬಿಡುಗಡೆಯಾದ 'ತುಳಸಿ ದಳ' ಚಿತ್ರದ ಮೂಲಕ ನಿರ್ದೇಶಕರಾದವರು ವೇಮಗಲ್ ಜಗನ್ನಾಥ ರಾವ್. ಕಳೆದ ನಾಲ್ಕು ದಶಕಗಳಲ್ಲಿ ಅವರು ಹಲವು ಚಿತ್ರಗಳನ್ನು ನಿರ್ದೇಶಿಸಿದ್ದು, ಈಗ 'ಆವರ್ತ' ಎಂಬ ಹೊಸ ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ.
ಇದನ್ನೂ ಓದಿ: ಕರ್ಮದ ಕುರಿತ ‘ಮೆಟಡೊರ್’ … ಒಂದೇ ಚಿತ್ರ; ಐದು ಕಥೆಗಳು
ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದ್ದು, ಇತ್ತೀಚೆಗೆ ಸೆನ್ಸಾರ್ ಸಹ ಆಗಿದೆ. ಚಿತ್ರ ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಸದಸ್ಯರು ಚಿತ್ರಕ್ಕೆ ಯಾವುದೇ ಕಟ್ಗಳಿಲ್ಲದೆ 'U/A' ಸರ್ಟಿಫಿಕೇಟ್ ನೀಡಿದ್ದಾರೆ, ಹೊಸ ತರಹದ ಚಿತ್ರಕಥೆ ಮತ್ತು ಕೊನೆಯವರೆಗೂ ಹಿಡಿದಿಡುವಂತಹ ಸಸ್ಪೆನ್ಸ್ ಚಿತ್ರದಲ್ಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಿವಂಗತ ಎಸ್ ಶಿವರಾಂ ನಟಿಸಿರುವ ಕೊನೆಯ ಚಿತ್ರ 'ಆವರ್ತ'. ಈ ಚಿತ್ರದ ಮೂಲಕ ಜಯಚಂದ್ರ, ಧನ್ವಿತ್ ಹಾಗೂ ನಯನಾ ಅವರನ್ನು ಪರಿಚಯಿಸುತ್ತಿದ್ದಾರೆ ವೇಮಗಲ್. ಅವರ ಜತೆಗೆ ಮೇಘನಾ ಗೌಡ, ಕಲ್ಲೇಶ್ ವರ್ಧನ್, ರಾಮರಾವ್, ಶಶಿಧರ್ ಮುಂತಾದವರು ಅಭಿನಯಿಸಿದ್ದಾರೆ.
ಈ ಚಿತ್ರವನ್ನು ಬೆಂಗಳೂರು, ಮಡಕೇರಿ, ಉಡುಪಿ, ಕುಂದಾಪುರ, ಕಾರವಾರ ಮುಂತಾದ ಕಡೆ ಚಿತ್ರೀಕರಿಸಲಾಗಿದ್ದು, ಬಿ.ಆರ್. ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣ ಹಾಗೂ ಅತಿಶಯ ಜೈನ್ ಅವರ ಸಂಗೀತ ಈ ಚಿತ್ರಕ್ಕಿದೆ.