

ಬೆಂಗಳೂರು: ಹೊಸಬರೇ ಸೇರಿ ನಿರ್ಮಾಣ ಮಾಡಿರುವ ‘ಅವಲಕ್ಕಿ ಪವಲಕ್ಕಿ’ ಸಿನಿಮಾ ಇದೀಗ ಎಲ್ಲೆಡೆ ತನ್ನ ಘಮ ಸೂಸುತ್ತಿದೆ. ದೇಶ ವಿದೇಶಗಳ ಹಲವು ಸಿನಿಮೋತ್ಸವಗಳಲ್ಲಿ ಭಾಗವಹಿಸಿ 60ಕ್ಕೂ ಅಧಿಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದೀಗ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲು ಸಿದ್ಧತೆ ನಡೆಸಿದ್ದು, ಇತ್ತೀಚೆಗಷ್ಟೇ ಟ್ರೇಲರ್ ರಿಲೀಸ್ ಆಗಿದೆ. ಫ್ಯಾಂಟಸಿ, ವಿಜ್ಞಾನದ ಹಿನ್ನೆಲೆಯುಳ್ಳ ‘ಅವಲಕ್ಕಿ ಪವಲಕ್ಕಿ’ ಸಿನಿಮಾದಲ್ಲಿ ಕಾಡು ಮತ್ತು ಆದಿವಾಸಿಗಳ ಕಥೆ ಒಂದೆಡೆ ಸಾಗಿದರೆ, ಮಕ್ಕಳ ಕಥೆಯೂ ಮತ್ತೊಂದು ಮಗ್ಗುಲಲ್ಲಿ ತೆರೆದುಕೊಳ್ಳಲಿದೆ.
ಈ ಬಗ್ಗೆ ಒಂದಷ್ಟು ಮಾಹಿತಿ ನೀಡುವ ನಿರ್ದೇಶಕ ದುರ್ಗಾ ಪ್ರಸಾದ್, ‘ಅವಲಕ್ಕಿಪಾಳ್ಯದಲ್ಲಿ ನಡೆಯುವ ಕಥೆ ಇದು. ರೋಚಕ ತಿರುವುಗಳಿರುವ ಈ ಚಿತ್ರದಲ್ಲಿ ಮಕ್ಕಳೇ ಪ್ರಧಾನ ಪಾತ್ರಧಾರಿಗಳಾದರೂ ಆದರೆ ಇದು ಮಕ್ಕಳ ಚಿತ್ರವಲ್ಲ’ ಎನ್ನುತ್ತಾರವರು. ರಂಜಿತಾ ಸುಬ್ರಮಣ್ಯ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಜುಬಿನ್ ಪೌಲ್ ಸಂಗೀತ ನೀಡಿದರೆ, ನಿರೀಕ್ಷಿತ್ ಛಾಯಾಗ್ರಹಣವಿದೆ. ರಾಘವೇಂದ್ರ, ಇಂದಿರಾ ನಾಯರ್, ಸಿಂಚನಾ ಚಂದ್ರಮೋಹನ್, ಪ್ರವೀಣ್, ಪ್ರಿಯಾ, ಉದಯ್ ಕುಮಾರ್, ನಾಗರಾಜ್ ಇತರರು ಪಾತ್ರವರ್ಗದಲ್ಲಿದ್ದಾರೆ.