Pawan Kalyan Divorce: ತೆಲುಗು ಚಿತ್ರರಂಗದ 'ಪವರ್ ಸ್ಟಾರ್', ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನದಲ್ಲಿ ಮತ್ತೊಮ್ಮೆ ಶಾಕಿಂಗ್ ಬೆಳವಣಿಗೆಯೊಂದು ನಡೆದು ಹೋಗಿದೆ. ದೀಪಾವಳಿ ಹಬ್ಬದಂದೇ ತಮ್ಮ ಮೂರನೇ ಪತ್ನಿ ರಷ್ಯಾ ಮೂಲದ ಅನ್ನಾ ಕೊಣಿದಾಲ ಜತೆಗಿನ 13 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ಬೈ ಹೇಳಿದ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ, ಚರ್ಚೆಗಳಿಗೆ ಗ್ರಾಸವಾಗಿದೆ.
ಪವನ್ ಕಲ್ಯಾಣ್ ಮತ್ತು ಅನ್ನಾ ಜೋಡಿ ದಿಢೀರ್ ದಾಂಪತ್ಯ ಜೀವನಕ್ಕೆ ವಿದಾಯ ಹಾಡಿರುವ ಸುದ್ದಿ ಸದ್ಯ ಟಾಲಿವುಡ್ ಅಂಗಳದಲ್ಲಿ ಭಾರೀ ಸಂಚಲನ ಮೂಡಿಸಿದೆ. 13 ವರ್ಷಗಳ ವೈವಾಹಿಕ ಬದುಕಿನ ಬಳಿಕ ಪರಸ್ಪರ ಒಪ್ಪಿಗೆಯಿಂದ ದೂರವಾಗುವ ನಿರ್ಧಾರ ಘೋಷಿಸಿದ ಬೆನ್ನಲ್ಲೇ ತೆಲುಗಿನ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಅವರ ಎರಡು ವರ್ಷಗಳ ಹಳೆಯ ಭವಿಷ್ಯ ನುಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗುವ ಮೂಲಕ ಮತ್ತೊಂದು ಹೊಸ ಚರ್ಚೆಗೆ ಕಾರಣವಾಗಿದೆ.
ರಾಜಕೀಯ ಅಖಾಡದಲ್ಲಿ ಸದ್ದು ಮಾಡುತ್ತಿದ್ದ ಪವನ್ ಕಲ್ಯಾಣ್ ಅವರ ಬಗ್ಗೆ ಸುಮಾರು 2 ವರ್ಷಗಳ ಹಿಂದೆ ಜೋತಿಷ್ಯ ನುಡಿದಿದ್ದ ವೇಣುಸ್ವಾಮಿ, ಪವನ್ರ ಜಾತಕದಲ್ಲಿ ನಾಲ್ಕನೇ ಮದುವೆಯ ಯೋಗವಿದೆ ಎಂದು ಹೇಳಿದ್ದರಂತೆ. ಈ ಹಳೆಯ ವಿಡಿಯೋ ಮತ್ತೆ ಮುನ್ನೆಲೆಗೆ ಬಂದಿದೆ. ಈಗ ದಂಪತಿಯ ವಿಚ್ಛೇದನದ ಸುದ್ದಿ ಹೊರಬಿದ್ದ ಬೆನ್ನಲ್ಲೇ ಆ ವಿಡಿಯೋವನ್ನು ಅಭಿಮಾನಿಗಳು ಮತ್ತೇ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ.
ಇನ್ನೊಂದೆಡೆ, ಅನ್ನಾ ಲೆಜ್ನೆವಾ ಅವರು ಕಳೆದ ಅಕ್ಟೋಬರ್ನಲ್ಲೇ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯನ್ನು ಡಿಲೀಟ್ ಮಾಡಿದ ವಿಚಾರ ಈಗ ಬೆಳಕಿಗೆ ಬಂದಿದೆ. ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟೀವ್ ಆಗಿದ್ದ ಅವರು, ಈಗ ಅಕೌಂಟ್ ಅನ್ನು ಡಿಲೀಟ್ ಮಾಡಲು ಡಿವೋರ್ಸ್ ವಿಷಯವೇ ಕಾರಣವಿರಬಹುದು ಎಂಬ ಹಲವು ಊಹಾಪೋಹಗಳು ಹರಿದಾಡಿವೆ. ಇದರಲ್ಲಿ ಸತ್ಯಕ್ಕೆ ಯಾವುದೂ ಹತ್ತಿರವಿಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು.
ಪವನ್ ಕಲ್ಯಾಣ್ ಮತ್ತು ಅನ್ನಾ ಅವರು ತಮ್ಮ ಆಪ್ತರು ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ, ನಮ್ಮ ಮಹತ್ವದ ಭಾಗವನ್ನು ಒಟ್ಟಿಗೆ ಕಳೆದ ಬಳಿಕ ಪರಸ್ಪರ ಅರ್ಥ ಮಾಡಿಕೊಂಡು ಮತ್ತು ಗೌರವದೊಂದಿಗೆ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ದಾಂಪತ್ಯ ಜೀವನ ಅಂತ್ಯಗೊಂಡರೂ ಉತ್ತಮ ಸ್ನೇಹಿತರಾಗಿ ಮತ್ತು ಜವಾಬ್ದಾರಿಯುತ ಪೋಷಕರಾಗಿ ಮುಂದುವರಿಯುತ್ತೇವೆ. ಮಕ್ಕಳ ಸಂತೋಷ ಮತ್ತು ಕ್ಷೇಮವೇ ನಮ್ಮ ಮೊದಲ ಆದ್ಯತೆ" ಎಂದು ಬರೆದಿದ್ದಾರೆ.
ಈ ವೈಯಕ್ತಿಕ ಬೆಳವಣಿಗೆಯ ಸಂದರ್ಭದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ವಿಶೇಷವಾಗಿ ಮನವಿ ಮಾಡಿದ್ದಾರೆ. ಹೇಳಿಕೆಯಲ್ಲಿ ದಿಢೀರ್ ವಿಚ್ಛೇದನಕ್ಕೆ ಕಾರಣವೇನು ಎಂಬುದನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ವರದಿಗಳ ಪ್ರಕಾರ, ಇಬ್ಬರೂ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಪವನ್ ಕಲ್ಯಾಣ್ ಅವರ ಹಿಂದಿನ ಎರಡು ಮದುವೆಗಳು ಮತ್ತು ವಿಚ್ಛೇದನಗಳು ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.
ಪವನ್ ಕಲ್ಯಾಣ್ ಅವರು 1997ರಲ್ಲಿ ನಂದಿನಿ ಅವರೊಂದಿಗೆ ಮೊದಲಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ, ದಾಂಪತ್ಯದಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ 1999ರ ವೇಳೆಗೆ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು. ಹಲವು ವರ್ಷಗಳ ಕಾನೂನು ಪ್ರಕ್ರಿಯೆಯ ಬಳಿಕ 2008ರ ಆಗಸ್ಟ್ನಲ್ಲಿ ವಿಚ್ಛೇದನ ಪಡೆದರು. ಈ ಡಿವೋರ್ಸ್ ಸಂದರ್ಭದಲ್ಲೇ ಪವನ್, ನಂದಿನಿಗೆ ಐದು ಕೋಟಿ ರೂಪಾಯಿ ಮೊತ್ತವನ್ನು ಒನ್ ಟೈಮ್ ಸೆಟ್ಲ್ಮೆಂಟ್ ಆಗಿ ನೀಡಲು ಒಪ್ಪಿಕೊಂಡಿದ್ದರು ಎಂದು ಅಂದಿನ ವರದಿಗಳು ತಿಳಿಸಿವೆ.
ನಂದಿನಿ ಅವರಿಂದ ವಿಚ್ಛೇದನ ಪಡೆದ ನಂತರ ಪವನ್ ಕಲ್ಯಾಣ್ ಅವರು ನಟಿ ಹಾಗೂ ಮಾಡೆಲ್ ರೇಣು ದೇಸಾಯಿ ಅವರನ್ನು 2009ರ ಜನವರಿಯಲ್ಲಿ ವಿವಾಹವಾದರು. ಇವರಿಬ್ಬರು 'ಬದ್ರಿ' ಮತ್ತು 'ಜಾನಿ' ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದ ಜೋಡಿ. ಮದುವೆಗೂ ಮುನ್ನ ಹಲವು ವರ್ಷಗಳಿಂದ ಪರಸ್ಪರ ಪರಿಚಯ ಹೊಂದಿದ್ದರು. ಬಳಿಕ ಮದುವೆಯಾಗಿ ಹೊಸ ಜೀವನ ಆರಂಭಿಸಿದರು.
ಈ ದಂಪತಿಗೆ ಅಕಿರಾ ನಂದನ್ ಮತ್ತು ಆಧ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, ಈ ಸಂಬಂಧವೂ ಹೆಚ್ಚು ಕಾಲ ಮುಂದುವರಿಯಲಿಲ್ಲ. 2011ರ ವೇಳೆಗೆ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು. ನಂತರ, 2012ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದು ದೂರ ಸರಿದರು.
ರೇಣು ದೇಸಾಯಿ ಅವರಿಂದ ವಿಚ್ಛೇದನ ಪಡೆದ ಪವನ್ ಕಲ್ಯಾಣ್, ರಷ್ಯಾ ಮೂಲದ ಅನ್ನಾ ಲೆಜ್ನೆವಾ ಅವರನ್ನು 2013ರ ಸೆಪ್ಟೆಂಬರ್ನಲ್ಲಿ ಮದುವೆಯಾದರು. ಅನ್ನಾ ಅವರು ಪವನ್ ಕಲ್ಯಾಣ್ ಅಭಿನಯದ 'ತೀನ್ ಮಾರ್' ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈ ದಂಪತಿಗೆ ಪೋಲೆನಾ ಅಂಜನಾ ಪವನೋವಾ ಮತ್ತು ಮಾರ್ಕ್ ಶಂಕರ್ ಪವನೋವಿಚ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಎಲ್ಲವೂ ಚೆನ್ನಾಗಿಯೇ ಇದೆ ಎಂದು ಎನ್ನುವಾಗಲೇ ಶಾಕಿಂಗ್ ಎಂಬಂತೆ ಇದೀಗ ತಮ್ಮ 13 ವರ್ಷಗಳ ದಾಂಪತ್ಯದ ಬದುಕಿಗೆ ಅನ್ನಾ ಮತ್ತು ಪವನ್ ಕಲ್ಯಾಣ್ ಡಿವೋರ್ಸ್ ನೀಡುವ ಮೂಲಕ ಸಂಪೂರ್ಣವಾಗಿ ದೂರ ಉಳಿಯುವುದಾಗಿ ಘೋಷಿಸಿದ್ದಾರೆ. ಒಟ್ಟಾರೆ, ಪವನ್ ಕಲ್ಯಾಣ್ ಅವರ ಮೂರನೇ ಮದುವೆ ಕೂಡ ವಿಚ್ಛೇದನದಲ್ಲೇ ಅಂತ್ಯಗೊಂಡಿರುವುದು ಇದೀಗ ನಟನ ಅಭಿಮಾನಿಗಳಲ್ಲಿ ಭಾರಿ ಅಚ್ಚರಿ, ಬೇಸರ ಮೂಡಿಸಿದೆ. ಸದ್ಯದ ಮಟ್ಟಿಗೆ ಅನ್ನಾ-ಪವನ್ರ ಈ ಕಟು ನಿರ್ಧಾರದ ಹಿಂದಿನ ಕಾರಣಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ,(ಏಜೆನ್ಸೀಸ್).