ಮದ್ಯದ ಅಮಲಿನಲ್ಲಿ ಪೊಲೀಸರ ಮೇಲೆ ಹಲ್ಲೆ; ಜೈಲರ್​ ವಿಲನ್ ವಿನಾಯಕನ್​​ ಬಂಧನ

police
Published on

ತೆಲಂಗಾಣ:  ಜನಪ್ರಿಯ ನಟ ವಿನಾಯಕನ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಮದ್ಯಪಾನ ಮಾಡಿ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಸಿಎಫ್​) ಕಾನ್​ಸ್ಟೇಬಲ್ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ನಟ ವಿನಾಯಕನ್​ರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಚ್ಚಿಯಿಂದ ಹೈದರಾಬಾದ್ ಮೂಲಕ ಗೋವಾಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಅಲ್ಲದೆ ಮದ್ಯದ ಅಮಲಿನಲ್ಲಿದ್ದ ವಿನಾಯಕನ್ ಠಾಣೆಯ ಕಾರ್ಯಾಚರಣೆಗೂ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಘಟನೆ ಕುರಿತು ಪ್ರತಿಕ್ರಿಯಿಸಿರುವ ವಿನಾಯಕನ್, ನಾನೇನೂ ತಪ್ಪು ಮಾಡಿಲ್ಲ. ಸಿಐಎಸ್ಎಫ್ ಅಧಿಕಾರಿಗಳು ತನ್ನನ್ನು ವಿಮಾನ ನಿಲ್ದಾಣದ ಕೊಠಡಿಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಎಂದು ಹೇಳಿದ್ದಾರೆ.

ಕಾಲಿವುಡ್​ನಲ್ಲಿ ಬ್ಲಾಕ್​ಬಸ್ಟರ್​ ಹಿಟ್​ ಆದ ಸೂಪರ್​ಸ್ಟಾರ್​ ರಜಿನಿಕಾಂತ್ ಅಭಿನಯದ ಜೈಲರ್​ ಸಿನಿಮಾದಲ್ಲಿ ವಿನಾಯಕನ್​ ಅವರು ಮುಖ್ಯ ಖಳನಾಯಕನಾಗಿ ನಟಿಸಿದ್ದಾರೆ. ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕವೇ ವಿನಾಯಕನ್,​ ಜೈಲರ್​ ಸಿನಿಮಾದಲ್ಲಿ ಅಬ್ಬರಿಸಿ ಬೊಬ್ಬಿರಿದ್ದಾರೆ.

ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿರುವ ವಿನಾಯಕನ್​ ಇದೀಗ ಮದ್ಯದ ಅಮಲಿನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಆದರೆ, ಠಾಣೆಯಲ್ಲೂ ಕುಡಿದ ಅಮಲಿನಲ್ಲಿ ವಿನಾಯಕನ್​ ರಂಪಾಟ ಮಾಡಿದ್ದಾರೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ಅಧಿಕಾರಿಗಳನ್ನು ನಿಂದಿಸಿದ್ದಾರೆ ಎನ್ನಲಾಗಿದೆ.

ಆದರೆ ಇಂತಹ ವಿವಾದದಲ್ಲಿ ವಿನಾಯಕನ ಹೆಸರು ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅಕ್ಟೋಬರ್ 23 ರಂದು ಸಹ ಅವರು ಅನುಚಿತ ವರ್ತನೆಗಾಗಿ ಜೈಲು ಪಾಲಾಗಿದ್ದರು. ಸದ್ಯ ವಿನಾಯಕನ್ ತಮಿಳು ಹಾಗೂ ತೆಲುಗಿನ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಅಂದಹಾಗೆ ವಿನಾಯಕನ್​ ಅವರು ಮಲಯಾಳಂ ಚಿತ್ರರಂಗದ ಖ್ಯಾತ ನಟ. ತಿಮಿರು ಮತ್ತು ಮಾರಿಯನ್​ ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ತಮಿಳು ಚಿತ್ರರಂಗಕ್ಕೂ ಪರಿಚಿತರಾದರು. ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. ಇದೀಗ ಜೈಲರ್​ ಸಿನಿಮಾದಲ್ಲಿ ನಟಿಸುವ ಎಲ್ಲ ಚಿತ್ರರಂಗದ ಗಮನ ಸೆಳೆದಿದ್ದಾರೆ. ಜೈಲರ್​ ಸಿನಿಮಾ ಬಿಡುಗಡೆಯಾಗುವವರೆಗೂ ಕಾವಲಯ್ಯ ಹಾಡಿನಿಂದಾಗಿ ತಮನ್ನಾ ಎಲ್ಲೆಡೆ ಸುದ್ದಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net