

ಬೆಂಗಳೂರು: ಆಶಿಕಾ ಇದುವರೆಗೂ ಹಲವು ಚಿತ್ರಗಳಲ್ಲಿ ಕ್ಯೂಟ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಅವರು 'ರೆಮೋ' ಚಿತ್ರದಲ್ಲಿ ವಿಭಿನ್ನವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಅದೇ ತಮ್ಮ ಜೀವನದ ಬೆಸ್ಟ್ ಪಾತ್ರ ಎಂದು ಹೇಳಿಕೊಂಡಿದ್ದಾರೆ.
ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಚಿತ್ರದ ಟ್ರೇಲರ್ ಭಾನುವಾರ ಬಿಡುಗಡೆಯಾಗಿದೆ. ಶಿವರಾಜಕುಮಾರ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇಶಾನ್ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ಸಿ.ಆರ್. ಮನೋಹರ್ ನಿರ್ಮಿಸಿದ್ದಾರೆ.
'ರೆಮೋ' ಚಿತ್ರದ ಟ್ರೇಲರ್ ನೋಡಿದವರೆಲ್ಲರೂ ವಿಭಿನ್ನವಾಗಿದೆ ಎನ್ನುತ್ತಿದ್ದಾರೆ. ಇದರಲ್ಲಿ ಆಶಿಕಾ, ಮೋಹನಾ ಎಂಬ ಸೆಲೆಬ್ರಿಟಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕನಿಗೆ ಸರಿಸಮನಾದ ಪಾತ್ರವೊಂದು ಈ ಚಿತ್ರದಲ್ಲಿ ಸಿಕ್ಕಿದೆ ಎಂದು ಅವರು ಹೇಳುತ್ತಾರೆ.
ಈ ಕುರಿತು ಮಾತನಾಡಿರುವ ಅವರು, ‘ಈ ಸಿನಿಮಾದಲ್ಲಿನ ಪಾತ್ರ ಭಿನ್ನವಾಗಿದೆ. ಈವರೆಗೆ ನಾನು ಮಾಡಿದ ಪಾತ್ರಗಳಲ್ಲಿ ಇದೇ ಬೆಸ್ಟ್. ಹೀರೋಗೆ ಸಮನಾಗಿ ಇರುವಂತಹ ಪಾತ್ರ ನನಗೆ ಸಿಕ್ಕಿದೆ. ಅದಕ್ಕೆ ನನ್ನನ್ನು ಆಯ್ಕೆ ಮಾಡಿದ ಪವನ್ ಒಡೆಯರ್ ಅವರಿಗೆ ಧನ್ಯವಾದಗಳು’ ಎನ್ನುತ್ತಾರೆ ಆಶಿಕಾ ರಂಗನಾಥ್.
ನಾಯಕ ಇಶಾನ್ ಈ ಚಿತ್ರದ ಬಗ್ಗೆ ಬಹಳ ಪಾಸಿಟಿವ್ ಆಗಿದ್ದಾರೆ. 'ನವೆಂಬರ್ 25 ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ. ನಾನು ಎಷ್ಟೇ ಸಿನಿಮಾ ಮಾಡಬಹುದು. ಆದರೆ ‘ರೇಮೊ’ ಚಿತ್ರ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ' ಎನ್ನುತ್ತಾರೆ ಇಶಾನ್.
ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ ಎನ್ನುವ ಪವನ್, 'ಈ ಚಿತ್ರದಲ್ಲಿ ಎಮೋಷನ್ ಇದೆ. ವೈದಿ ಅವರ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರವನ್ನು ಮತ್ತಷ್ಟು ಸುಂದರವಾಗಿಸಿದೆ. ಇಶಾನ್ ಹಾಗೂ ಆಶಿಕಾ ರಂಗನಾಥ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ'ಎನ್ನುತ್ತಾರೆ.