ಆಶಿಕಾ ಕಬಡ್ಡಿ ಕಬಡ್ಡಿ ... ತಮಿಳು ಚಿತ್ರದಲ್ಲಿ ಅಥರ್ವ ಜತೆಗೆ ನಟನೆ

Ashika Ranganath - Final
Published on

ಬೆಂಗಳೂರು: ‘ಈಗಾಗಲೇ ಪರಭಾಷೆಯ ಒಂದು ಸಿನಿಮಾ ಮಾತುಕತೆ ನಡೆಯುತ್ತಿದೆ. ಅಧಿಕೃತವಾಗಿ ಇನ್ನೂ ಸಹಿ ಹಾಕಿಲ್ಲ. ಎಲ್ಲವೂ ಅಂದುಕೊಂಡಂತೆ ಆದರೆ, ಆಗಸ್ಟ್‌ನಲ್ಲಿ ಆ ಸಿನಿಮಾ ಕೆಲಸ ಶುರುವಾಗಲಿದೆ ...’

ಹಾಗಂತ ಮೂರು ತಿಂಗಳ ಹಿಂದೆಯೇ ‘ವಿಜಯವಾಣಿ’ ಜತೆಗೆ ಮಾತನಾಡುವ ಸಂದರ್ಭದಲ್ಲಿ ಆಶಿಕಾ ಹೇಳಿಕೊಂಡಿದ್ದರು. ಅದರಂತೆ, ಆ ಚಿತ್ರ ಶುರುವಾಗಿದೆ. ಅಷ್ಟೇ ಅಲ್ಲ, ಚಿತ್ರೀಕರಣದಲ್ಲಿ ಭಾಗವಹಿಸಿರುವ ಫೋಟೋಗಳನ್ನು ಆಶಿಕಾ ತಮ್ಮ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ತಮಿಳಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಅಥರ್ವಗೆ ನಾಯಕಿಯಾಗಿ ಆಶಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ‘ಬಂಗಾರದ ಮನುಷ್ಯ’, ‘ಬೂತಯ್ಯನ ಮಗ ಅಯ್ಯು’ ಮುಂತಾದ ಕ್ಲಾಸಿಕ್ ಚಿತ್ರಗಳನ್ನು ನಿರ್ದೇಶಿಸಿರುವ ಸಿದ್ಧಲಿಂಗಯ್ಯ ಅವರ ಮೊಮ್ಮಗನಾದ ಅಥರ್ವ, ಈಗ ತಮಿಳು ಚಿತ್ರರಂಗದಲ್ಲಿ ಜನಪ್ರಿಯ ನಟ. ಈ ಚಿತ್ರದಲ್ಲಿ ಅಥರ್ವ ಕಬಡ್ಡಿ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದು, ಆಶಿಕಾ ಸಹ ಇಲ್ಲಿ ಕಬಡ್ಡಿ ಆಟಗಾರ್ತಿಯಾಗಿ ನಟಿಸುತ್ತಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಅಥರ್ವ ಮತ್ತು ಆಶಿಕಾ ಅಲ್ಲದೆ, ರಾಜ್‌ಕಿರಣ್, ರಾಧಿಕಾ ಶರತ್ ಕುಮಾರ್, ರವಿ ಕಾಳೆ ಮುಂತಾದವರು ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net