

| ಚೇತನ್ ನಾಡಿಗೇರ್
ಲತಾ ಮಂಗೇಶ್ಕರ್ ನಿಧನರಾದ ನಂತರ ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಬಹಳ ವೈರಲ್ ಆಗಿತ್ತು. ಭಾರತದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರು ಮತ್ತು ಈಗಿನ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಲತಾ ಮಂಗೇಶ್ಕರ್ ಇರುವ ಕೊಲಾಜ್ ಫೋಟೋವೊಂದನ್ನು ಹಲವರು ಹಂಚಿಕೊಂಡಿದ್ದರು. ಲತಾ ಮಂಗೇಶ್ಕರ್ ಹೇಗೆ ಸ್ವಾತಂತ್ರ್ಯ ಭಾರತದ ಇತಿಹಾಸದ ಮುಖ್ಯ ಅಂಗವಾಗಿದ್ದರು ಮತ್ತು ಹೇಗೆ ದೇಶದಲ್ಲಾದ ಹಲವು ಬದಲಾವಣೆ ಮತ್ತು ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದರು ಎಂಬುದನ್ನೂ ಶೇರ್ ಮಾಡಿದ್ದರು. ದೇಶದ ಇತಿಹಾಸವಷ್ಟೇ ಅಲ್ಲ, ಭಾರತೀಯ ಚಲನಚಿತ್ರ ಸಂಗೀತ ಕ್ಷೇತ್ರದಲ್ಲೂ ಆದ ಹಲವು ಬದಲಾವಣೆ ಮತ್ತು ಬೆಳವಣಿಗೆಗಳಿಗೆ ಅವರು ಸಾಕ್ಷಿಯಾಗಿದ್ದರು. ಸಂಗೀತ ಕ್ಷೇತ್ರದ ಸುವರ್ಣ ಯುಗವನ್ನೂ ಕಂಡವರು ಅವರು. ಅದೇ ರೀತಿ ಸಿನಿಮಾಗಳಲ್ಲಿ ಸಂಗೀತ ಪರಂಪರೆ ಕ್ಷೀಣಿಸುವುದನ್ನೂ ನೋಡಿದ್ದರು.
ಲತಾ ಮಂಗೇಶ್ಕರ್ ತಮ್ಮ ವೃತ್ತಿಜೀವನದ ಮೊದಲ ಹಾಡನ್ನು ಹಾಡಿದ್ದು 1942ರಲ್ಲಿ. ಕೊನೆಯದಾಗಿ ಹಾಡಿದ್ದು 2009ರಲ್ಲಿ. ಅಂದರೆ 67 ವರ್ಷಗಳ ಕಾಲ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. 91 ವರ್ಷಗಳ ಟಾಕಿಯುಗದ ಇತಿಹಾಸದಲ್ಲಿ 67 ವರ್ಷಗಳ ಕಾಲ ಸಕ್ರಿಯವಾಗಿದ್ದು ಕಡಿಮೆ ಏನಲ್ಲ. ಇನ್ನು, ಕೊನೆಯ 13ವರ್ಷಗಳು ಅವರು ಯಾವುದೇ ಹೊಸ ಸಿನಿಮಾ ಹಾಡು ಹಾಡದಿರಬಹುದು. ಆದರೆ, ಚಿತ್ರರಂಗದಲ್ಲಿನ ಆಗು-ಹೋಗುಗಳನ್ನು ಗಮನಿಸಿದ್ದರು. ಹಾಗೆ ನೋಡಿದರೆ, ಹಿಂದಿ ಚಿತ್ರಗೀತೆಗಳು ಜನಪ್ರಿಯವಾಗಿದ್ದು ಮತ್ತು ಆ ಜನಪ್ರಿಯತೆ ಕಡಿಮೆಯಾಗಿದ್ದೆರಡಕ್ಕೂ ಲತಾ ಮಂಗೇಶ್ಕರ್ ಸಾಕ್ಷಿಯಾಗಿದ್ದರು. ಹಿಂದಿ ಚಿತ್ರಗೀತೆಗಳು ಬಹಳ ಜನಪ್ರಿಯವಾಗಿದ್ದು 50ರ ದಶಕದಲ್ಲಿ. ಅದೂ ಗ್ರಾಮಾಫೋನ್ ಮತ್ತು ರೇಡಿಯೋಗಳ ಜಮಾನದಲ್ಲಿ. ಕ್ರಮೇಣ ಹಿಂದಿ ಚಿತ್ರಗೀತೆಗಳು ಉಚ್ಛಾ ›ಯ ಹಂತಕ್ಕೆ ತಲುಪಿತು. ಲತಾ ಮಂಗೇಶ್ಕರ್ ಜತೆಗೆ ಮೊಹಮ್ಮದ್ ರಫಿ, ಕಿಶೋರ್ ಕುಮಾರ್, ಮುಖೇಶ್, ಆಶಾ ಭೋಂಸ್ಲೆ ಮುಂತಾದ ಹಲವು ಜನಪ್ರಿಯ ಗಾಯಕರು ಧ್ವನಿ ಸೇರಿಸಿ, ಹಿಂದಿ ಚಿತ್ರಗೀತೆಗಳ ಜನಪ್ರಿಯತೆಯನ್ನು ತುತ್ತತುದಿ ತಲುಪಿಸಿದರು. ಆ ಜನಪ್ರಿಯತೆ ಈಗೊಂದು ದಶಕದವರೆಗೂ ಇದ್ದೇ ಇತ್ತು.
ಆದರೆ, ಕಳೆದ ಒಂದು ದಶಕವನ್ನು ಸೂಕ್ಷ್ಮವಾಗಿ ಗಮನಿಸಿ, ಹಿಂದಿ ಚಿತ್ರರಂಗ ಸಾಕಷ್ಟು ಬದಲಾಗಿದೆ. ಹಾಡುಗಳ ಸಂಖ್ಯೆ ಬಹಳ ಕಡಿಮೆಯಾಗಿದೆ. ಪೂರ್ಣಪ್ರಮಾಣದ ಹಾಡುಗಳು ಕಡಿಮೆಯಾಗಿ, ಸಣ್ಣಸಣ್ಣ ಹಾಡುಗಳು ಹೆಚ್ಚಾಗಿವೆ. ರೀಮಿಕ್ಸ್ ಹಾಡುಗಳ ಆರ್ಭಟ ಜೋರಾಗಿದೆ. ಕಳೆದ ಐದು ವರ್ಷಗಳಲ್ಲಿ ನಿಮಗಿಷ್ಟವಾದ ಹಾಡುಗಳು ಯಾವುದು ಎಂದರೆ ಥಟ್ಟನೆ ಹೇಳುವುದು ಕಷ್ಟ. ಒಂದು ಕಾಲಕ್ಕೆ ಹಿಂದಿ ಚಿತ್ರಗೀತೆಗಳ ಉಚ್ಛ್ರಾಯ ಸ್ಥಿತಿಯನ್ನು ನೋಡಿದ್ದ ಲತಾ ಮಂಗೇಶ್ಕರ್, ಈ ಸ್ಥಿತಿಯನ್ನೂ ನೋಡುವಂತಾಯಿತು. ಇವತ್ತಿನ ದಿನಗಳಲ್ಲಿ ಹಿಂದಿ ಹಾಡುಗಳು ಹೀಗಾಗುತ್ತಿರುವ ಬಗ್ಗೆ ಅವರ ಅಭಿಪ್ರಾಯ ಏನಿತ್ತೋ ಗೊತ್ತಿಲ್ಲ. ಆದರೆ, ಒಂದು ಕಾಲಕ್ಕೆ ಸುವರ್ಣ ಯುಗವನ್ನು ನೋಡಿದ್ದ ಅವರು, ಈ ಯುಗಕ್ಕೂ ಸಾಕ್ಷಿಯಾಗಿದ್ದರು ಎನ್ನುವುದು ವಿಶೇಷ.
ಇನ್ನು, ತಾಂತ್ರಿಕವಾಗಿಯೂ ಸಾಕಷ್ಟು ಬದಲಾವಣೆಗಳನ್ನು ಅವರು ಕಂಡಿದ್ದಾರೆ. ಲತಾ ಮಂಗೇಶ್ಕರ್ ಹಾಡಿದ ಹಾಡುಗಳನ್ನು ಜನರಿಗೆ ಮುಟ್ಟಿಸುವುದಕ್ಕೆ, ಮೊದಲೇ ಹೇಳಿದಂತೆ ಮೊದಲು ರೇಡಿಯೋ ಮತ್ತು ಗ್ರಾಮಾಫೋನ್ ಮಾತ್ರ ಇದ್ದವು. ಕಾಲ ಬದಲಾದಂತೆ ಕ್ಯಾಸೆಟ್ಗಳು ಬಂದವು. ಟೇಪ್ರೆಕಾರ್ಡರ್, ಸಿಡಿ ಪ್ಲೇಯರ್, ಐಪಾಡ್, ಎಂಪಿಥ್ರೀ ಪ್ಲೇಯರ್ ... ಹೀಗೆ ಸಾಧನಗಳು ಬೇರೆಯಾಗಿ ಈಗ ಕಾರವಾನ್ ರೇಡಿಯೋವರೆಗೂ ಬಂದಿದೆ. ಮುಂದೆ ತಾಂತ್ರಿಕತೆ ಬದಲಾಗಿ ಮತ್ತಷ್ಟು ಮಗದಷ್ಟು ಹೊಸ ಉಪಕರಣಗಳು ಬರಬಹುದು. ಆದರೆ, ಸಂಗೀತ ಕ್ಷೇತ್ರ ಇರುವವರೆಗೂ ಲತಾ ಮಂಗೇಶ್ವರ್ ಹಾಡುಗಳು ಯಾವತ್ತಿದ್ದರೂ ಜೀವಂತ. ಆ ಸುಧೆಗೆ ಸಾವಿಲ್ಲ...