ವಿಭಿನ್ನ ಪ್ರಯೋಗ ಮಾಡುವಾಸೆ; ಒಂದೇ ತರಹದ ಪಾತ್ರಕ್ಕೆ ಸೀಮಿತವಾಗಲು ನನಗಿಷ್ಟವಿಲ್ಲ

Vaibhavi
Published on

ಬೆಂಗಳೂರು: ‘ಗಾಳಿಪಟ 2’ ನಂತರ ವೈಭವಿ ಶಾಂಡಿಲ್ಯ, ಇದೀಗ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಆ ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ, ಈ ಚಿತ್ರದಲ್ಲಿನ ಪಾತ್ರ ಅವರ ನಿಜಜೀವನಕ್ಕೆ ಬಹಳ ಹತ್ತಿರವಿದೆಯಂತೆ. ‘ಗಾಳಿಪಟ 2’ನಲ್ಲಿ ತಮ್ಮ ನಿಜಜೀವನಕ್ಕಿಂತ ವಿರುದ್ಧವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವೈಭವಿ, ಈಗ ತಮಗೆ ಹತ್ತಿರವಾದ ಪಾತ್ರದಲ್ಲಿ ನಟಿಸುತ್ತಿರುವ ಬಗ್ಗೆ ಖುಷಿಯಾಗುತ್ತಾರೆ.

ಈ ಕುರಿತು ಮಾತನಾಡುವ ವೈಭವಿ, ‘‘ಮಾರ್ಟಿನ್’ ನನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ನಿಜಜೀವನದಲ್ಲಿ ನಾನು ಹೇಗಿದ್ದೀನೋ, ಈ ಚಿತ್ರದಲ್ಲೂ ಅದೇ ತರಹದ ಪಾತ್ರವೊಂದು ಮಾಡುತ್ತಿದ್ದೇನೆ. ಇದರಲ್ಲಿ ನನ್ನದು ಬಬ್ಲಿ ಹುಡುಗಿಯ ಪಾತ್ರ. ಯಾರಿಗೂ ಹೆದರದ, ಜೀವನದಲ್ಲಿ ಏನಾದರೂ ಸಾಧಿಸುವ ಆಸೆ ಹೊತ್ತಿರುವ ಗಟ್ಟಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ.

ಒಬ್ಬ ನಟಿಯಾಗಿ ವಿಭಿನ್ನ ಪ್ರಯೋಗಗಳನ್ನು ಮಾಡುವುದಕ್ಕೆ ಇಷ್ಟ ಎನ್ನುವ ವೈಭವಿ, ‘ಒಂದೇ ತರಹದ ಪಾತ್ರಕ್ಕೆ ಸೀಮಿತವಾಗಲು ನನಗಿಷ್ಟವಿಲ್ಲ. ಡ್ರಗ್ ಅಡಿಕ್ಟ್ ಪಾತ್ರ, ಹಾರರ್, ಮಹಿಳಾ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಳ್ಳುವಾಸೆ. ಜತೆಗೆ ರಾಜಮೌಳಿ ಶೈಲಿಯ ಲಾರ್ಜರ್ ದ್ಯಾನ್ ಲೈಫ್​ನಂತಹ ಚಿತ್ರಗಳಲ್ಲೂ ಅಭಿನಯಿಸಬೇಕು’ ಎನ್ನುತ್ತಾರೆ.

‘‘ಮಾರ್ಟಿನ್’ ಚಿತ್ರಕ್ಕಾಗಿ ಮಂಗಳೂರು, ಉಡುಪಿಯಲ್ಲಿ ಚಿತ್ರೀಕರಣ ಮಾಡುವಾಗ, ಹಲವರು ಬಂದು ಗುರುತಿಸಿ ಸೆಲ್ಪಿ ಕ್ಲಿಕ್ಕಿಸಿಕೊಂಡರು. ಇನ್ನು, ‘ಗಾಳಿಪಟ 2’ ಚಿತ್ರ ನೋಡಲು ಮುಂಬೈನಲ್ಲಿ ಕುಟುಂಬದವರೊಂದಿಗೆ ಹೋಗಿದ್ದೆ. ಅಲ್ಲಿಯೂ ನನ್ನನ್ನು ಗುರುತಿಸಿ ಪ್ರೀತಿಯಿಂದ ಮಾತನಾಡಿಸಿದರು. ಇವೆಲ್ಲವನ್ನೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ’ ಎನ್ನುತ್ತಾರೆ ನಟಿ ವೈಭವಿ ಶಾಂಡಿಲ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net