ಕಣ್ಣಪ್ಪನ ಶಿವಧ್ಯಾನ; ಶ್ರೀ ಶ್ರೀ ರವಿಶಂಕರ್​ ಗುರೂಜಿ ಅವರಿಂದ ಚಿತ್ರದ ಮೊದಲ ಹಾಡು ಬಿಡುಗಡೆ

11
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ವಿಷ್ಣು ಮಂಚು ನಾಯಕನಾಗಿರುವ, ಪ್ರಭಾಸ್​, ಅಕ್ಷಯ್​ ಕುಮಾರ್​, ಮೋಹನ್​ ಲಾಲ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪ್ಯಾನ್​ ಇಂಡಿಯಾ ಸಿನಿಮಾ "ಕಣ್ಣಪ್ಪ'. ಭಾರೀ ಬಜೆಟ್​ನಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಹಿರಿಯ ನಟ ಮೋಹನ್​ ಬಾಬು ನಿರ್ಮಿಸುತ್ತಿದ್ದು, ಮುಕೇಶ್​ ಕುಮಾರ್​ ಸಿಂಗ್​ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೆ ಆರ್ಟ್​ ಆಫ್​​ ಲಿವಿಂಗ್​ನ ಶ್ರೀ ಶ್ರೀ ರವಿಶಂಕರ್​ ಗುರೂಜಿ ಚಿತ್ರದ "ಶಿವ ಶಿವ ಶಂಕರ' ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ಮೋಹನ್​ ಬಾಬು, ವಿಷ್ಣು ಮಂಚು, ಮುಕೇಶ್​, ಸಂಗೀತ ನಿರ್ದೇಶಕ ಸ್ಟೀನ್​ ದೇವಸ್ಸಿ ಜತೆಗೆ ಕರ್ನಾಟಕದಲ್ಲಿ ಚಿತ್ರವನ್ನು ವಿತರಣೆ ಮಾಡುತ್ತಿರುವ ರಾಕ್​ಲೈನ್​ ವೆಂಕಟೇಶ್​ ಹಾಗೂ ಡಾ. ಭಾರತಿ ವಿಷ್ಣುವರ್ಧನ್​ ಮತ್ತು ಮಾಜಿ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಷ್​ ಕೂಡ ಉಪಸ್ಥಿತರಿದ್ದರು. ಮೋಹನ್​ ಬಾಬು, "ನನಗೆ ಕಣ್ಣಪ್ಪ ಅಂದಾಕ್ಷಣ ಡಾ. ರಾಜಕುಮಾರ್​ ನೆನಪಿಗೆ ಬರುತ್ತಾರೆ. ಅವರ ಕಣ್ಣಪ್ಪ ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಹೋಲಿಕೆಯೇ ಇಲ್ಲ. ಅವರಂತೆ ನಟಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಸಿನಿಮಾ ಅವರ ಚಿತ್ರಕ್ಕೆ ಟ್ರಿಬ್ಯೂಟ್​' ಎಂದರು.

ನಾಯಕ ವಿಷ್ಣು ಮಂಚು, "ಸೋಮವಾರ ಶಿವನ ದಿನ. ಅಂದೇ ರವಿಶಂಕರ್​ ಗುರೂಜಿಯವರು ನಮ್ಮ ಚಿತ್ರದ "ಶಿವ ಶಿವ ಶಂಕರ' ಹಾಡನ್ನು ಬಿಡುಗಡೆ ಮಾಡಿರುವುದು ಖುಷಿ ನೀಡಿದೆ. ಸಿನಿಮಾ ಇದೇ ಏ. 25ರಂದು ರಿಲೀಸ್​ ಆಗಲಿದೆ' ಎಂದು ಹೇಳಿಕೊಂಡರು. ಡಾ. ಭಾರತಿ ವಿಷ್ಣುವರ್ಧನ್​, "ಹಾಡು ಚೆನ್ನಾಗಿದೆ. ನಮ್ಮ ಯಜಮಾನರಿಗೆ ಮೋಹನ್​ ಬಾಬು ಎಂದರೆ ಬಹಳ ಪ್ರೀತಿ. ಅವರಿಗೂ ನಮ್ಮ ಯಜಮಾನರೆಂದರೆ ಅಷ್ಟೇ ಪ್ರೀತಿ. ಅವರ ಗೆಳೆತನ ಎಷ್ಟು ಗಾಢವಾಗಿತ್ತು ಎಂದರೆ ಮೋಹನ್​ ಬಾಬು ತಮ್ಮ ಪುತ್ರನಿಗೂ ನಮ್ಮ ಯಜಮಾನರ ಹೆಸರನ್ನೇ ಇಟ್ಟಿದ್ದಾರೆ' ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net