

ವಿಜಯವಾಣಿ ಸುದ್ದಿಜಾಲ ಬೆಂಗಳೂರು
‘ವಿಜಯ ದಶಮಿ’, ‘ಆಟೋ ಶಂಕರ್’, ‘ಮಹಾಕಾಳಿ’ ಸೇರಿ ಹಲವು ಚಿತ್ರಗಳಿಗೆ ಕಥೆ, ಚಿತ್ರಕಥೆ ಸಂಭಾಷಣೆ ಬರೆದಿರುವ ಖ್ಯಾತಿ ವಿಜಯ್ ಕುಮಾರ್‌ಗೆ ಸಲ್ಲುತ್ತದೆ. ಇದೀಗ ಅವರ ಮಗ ಅರ್ಜುನ್ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ಹೆಸರು ‘ಗನ್ಸ್ ಆ್ಯಂಡ್ ರೋಸಸ್’.
ಬೆಂಗಳೂರು ಅಂಡರ್‌ವರ್ಲ್ಡ್ ಕುರಿತ ಚಿತ್ರವಾದ ಕಾರಣ ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಸಲಾಗುತ್ತಿದೆ. ಜತೆಗೆ ಲವ್‌ಸ್ಟೋರಿ ಕಥಾಹಂದರವಿದ್ದು ಕೆಂಗೇರಿ, ಕಂಠೀರವ ಸ್ಟುಡಿಯೋ, ಉಲ್ಲಾಳ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಕೆಲ ದಿನಗಳ ಕಾಲ ಮಾತಿನ ಭಾಗದ ಚಿತ್ರೀಕರಣ ಮಾಡಲಾಗಿದ್ದು, ಇದೀಗ ಸಾಹಸ ಸನ್ನಿವೇಶಗಳ ಶೂಟಿಂಗ್‌ನಲ್ಲಿ ಚಿತ್ರತಂಡ ಬಿಜಿಯಾಗಿದೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದಲ್ಲಿ ಫೈಟ್ ಸೀಕ್ವೆನ್ಸ್ ಮೂಡಿಬರುತ್ತಿದೆ.
ಶರತ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು ಎಚ್.ಎಸ್. ಶ್ರೀನಿವಾಸ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಶಶಿಕುಮಾರ್ ಸಂಗೀತ, ಜನಾರ್ಧನ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಇರಲಿದೆ. ಅರ್ಜುನ್‌ಗೆ ಯಶ್ಚಿಕ ನಿಷ್ಕಲ ನಾಯಕಿಯಾಗಿದ್ದು, ಶೋಭರಾಜ್, ಅವಿನಾಶ್, ಅಶ್ವತ್ಥ್ ನೀನಾಸಂ, ಹರೀಶ್, ಜೀವನ್ ರಿಚಿ, ಅರುಣ ಬಾಲರಾಜ್ ಪ್ರಮುಖ ತಾರಾಗಣದಲ್ಲಿದ್ದಾರೆ.