ಏಪ್ರಿಲ್ 10ರಂದು 'ಅರ್ಜುನ್ ಗೌಡ' ಚಿತ್ರದ ಟ್ರೇಲರ್ ...

Arjun Gowda - Final
Published on

ಬೆಂಗಳೂರು: ಪ್ರಜ್ವಲ್​ ದೇವರಾಜ್​ ಅಭಿನಯದ 'ಇನ್​​ಸ್ಪೆಕ್ಟರ್​ ವಿಕ್ರಂ' ಚಿತ್ರವು ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆಯಾಗಿ ಹೌಸ್​ಫುಲ್​ ಪ್ರದರ್ಶನಗಳನ್ನು ಕಂಡಿದೆ. ಈಗ ಪ್ರಜ್ವಲ್​ ಅಭಿನಯದ ಇನ್ನೊಂದು ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದೇ 'ಅರ್ಜುನ್​ ಗೌಡ'.

'ಅರ್ಜುನ್​ ಗೌಡ' ಚಿತ್ರವು ಎರಡು ವರ್ಷಗಳ ಹಿಂದೆಯೇ ಪ್ರಾರಂಭವಾಗಬೇಕಿತ್ತು. ಚಿತ್ರೀಕರಣ ಮುಗಿದು ಕಳೆದ ವರ್ಷ ಚಿತ್ರ ಬಿಡುಗಡೆಯಾಗಬೇಕು ಎನ್ನುವಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಯಿತು. ಇದೀಗ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಮೊದಲ ಹಂತವಾಗಿ ಏಪ್ರಿಲ್​ 10ರಂದು ಚಿತ್ರದ ಟ್ರೇಲರ್​ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅದ್ದೂರಿ ಚಿತ್ರಗಳನ್ನು ನಿರ್ಮಿಸಿದವರು ರಾಮು. ತಮ್ಮ ರಾಮು ಪ್ರೊಡಕ್ಷನ್ಸ್​ ಸಂಸ್ಥೆಯಿಂದ ಹಲವು ಆಕ್ಷನ್​ ಚಿತ್ರಗಳನ್ನು ನಿರ್ಮಿಸಿರುವ ಅವರು, ಇದೀಗ 'ಅರ್ಜುನ್​ ಗೌಡ' ಚಿತ್ರವನ್ನು ನಿರ್ಮಿಸಿ, ಬಿಡುಗಡೆಯ ಹಂತಕ್ಕೆ ತಂದಿದ್ದಾರೆ. ಈ ಚಿತ್ರ ಸಹ ಅವರ ಹಿಂದಿನ ಚಿತ್ರಗಳ ತರಹ ಪಕ್ಕ ಆಕ್ಷನ್​ ಚಿತ್ರವಾಗಿದ್ದು, ಚಿತ್ರವನ್ನು ಇತ್ತೀಚೆಗೆ ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿಯು 'ಯು/ಎ' ಪ್ರಮಾಣಪತ್ರ ನೀಡಿದೆ.

'ಅರ್ಜುನ್​ ಗೌಡ' ಚಿತ್ರಕ್ಕೆ ಲಕ್ಕಿ ಶಂಕರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿದೇರ್ಶಿಸಿದ್ದಾರೆ.ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ಅಭಿನಯಿಸಿದ್ದಾರೆ. ಬಾಲಿವುಡ್​​ನ ರಾಹುಲ್ ದೇವ್, 'ಸ್ಪರ್ಶ' ರೇಖಾ, ಸಾಧು ಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್ ಶೆಟ್ಟಿ, ದಿನೇಶ್ ಮಂಗಳೂರು, ಶೋಭತ್, ಜೀವನ್, ಹನುಮಂತೇ ಗೌಡ, ಮೋಹನ್ ಜುನೇಜ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಈ ಚಿತ್ರದಲ್ಲಿ ಒಟ್ಟು ಏಳು ಫೈಟ್​ಗಳಿದ್ದು, ಮಾಸ್​ ಮಾದ ಸಾಹಸ ಸಂಯೋಜನೆ ಮಾಡಿದ್ದಾರೆ. ಕವಿರಾಜ್, ರಾಘವೇಂದ್ರ ಕಾಮತ್, ಶಂಕರ್ ಹಾಡುಗಳನ್ನು ಬರೆದಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಜೈ ಆನಂದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net