

ಮುಂಬೈ: ಬಾಲಿವುಡ್ನ ಜನಪ್ರಿಯ ನಟ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ನಟ ಅರ್ಬಾಜ್ ಖಾನ್ ಅವರು ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಅವರನ್ನು ನಿನ್ನೆ (ಡಿ.24) ರಾತ್ರಿ ನಡೆದ ಸರಳ ಸಮಾರಂಭದಲ್ಲಿ ವರಿಸಿದ್ದಾರೆ. ಅರ್ಬಾಜ್ ಅವರ ಪುತ್ರ ಅರ್ಹಾನ್ ಖಾನ್ ಮದುವೆಗೆ ಆಗಮಿಸಿ ಶುಭಕೋರಿದ್ದು ಎಲ್ಲರ ಗಮನ ಸೆಳೆಯಿತು.
ಮುಂಬೈನಲ್ಲಿರುವ ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರ ಮನೆಯಲ್ಲಿ ಮದುವೆ ಸಮಾರಂಭ ತುಂಬಾ ಸರಳವಾಗಿ ನಡೆಯಿತು. ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ನಡುವೆ ಅರ್ಬಾಜ್ ಮತ್ತು ಶುರಾ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅರ್ಬಾಜ್ ಪಾಲಕರಾದ ಸಲೀಂ ಖಾನ್ ಮತ್ತು ಸುಶಿಲಾ ಚರಕ ಹಾಗೂ ಸಹೋದರ ಸಲ್ಮಾನ್ ಖಾನ್ ಕೂಡ ಉಪಸ್ಥಿತರಿದ್ದರು. ಅಲ್ವಿರಾ ಖಾನ್ ಅಗ್ನಿಹೋತ್ರಿ, ಪತಿ ಅತುಲ್ ಅಗ್ನಿಹೋತ್ರಿ, ಸಲ್ಮಾನ್ ಖಾನ್ ಅವರ ರೂಮರ್ಡ್ ಗರ್ಲ್ಫ್ರೆಂಡ್ ಯುಲಿಯಾ ವಂಟೂರ್, ರವಿನಾ ಟಂಡನ್ ಮತ್ತು ಅವರ ಪುತ್ರಿ ರಾಶಾ ಕೂಡ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದರು.
ಹೊಸ ಸಿನಿಮಾ 'ಪಟ್ನಾ ಶುಕ್ಲಾ' ಸೆಟ್‌ನಲ್ಲಿ ಅರ್ಬಾಜ್ ಖಾನ್ ಮತ್ತು ಶುರಾ ಖಾನ್ ಭೇಟಿಯಾದರು. ಅರ್ಬಾಜ್ ಅವರು ಈ ಹಿಂದೆ ನಟಿ ಮಲೈಕಾ ಅರೋರಾ ಅವರನ್ನು ಮದುವೆಯಾಗಿದ್ದರು. 2016ರ ಮಾರ್ಚ್ ತಿಂಗಳಲ್ಲಿ ಇಬ್ಬರು ಬೇರೆ ಬೇರೆಯಾಗುತ್ತಿರುವುದಾಗಿ ಘೋಷಿಸಿದರು. 1998ರಲ್ಲಿ ನಡೆದ ಇಬ್ಬರ ವಿವಾಹ 19 ವರ್ಷಗಳ ನಂತರ 2017, ಮೇ 11ರಂದು ಅಧಿಕೃತವಾಗಿ ಡಿವೋರ್ಸ್ ಆದರು. ಮಲೈಕಾಳೊಂದಿಗೆ ಸಂಬಂಧ ಮುರಿದುಬಿದ್ದ ನಂತರ, ಅರ್ಬಾಜ್ ತನ್ನ ನಟಿ ಮತ್ತು ರೂಪದರ್ಶಿ ಜಾರ್ಜಿಯಾ ಆಂಡ್ರಿಯಾ ಅವರೊಂದಿಗೆ ದೀರ್ಘಕಾಲದಿಂದ ಡೇಟಿಂಗ್ ಮಾಡುತ್ತಿದ್ದರು. ಆದರೆ ಇಬ್ಬರೂ ಬೇರ್ಪಟ್ಟರು. ಇದಾದ ನಂತರ ಒಂಟಿಯಾಗಿದ್ದ ಅರ್ಬಾಜ್ ಅವರು ಇದೀಗ ಮತ್ತೆ ಮದುವೆ ಆಗುತ್ತಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ಶುರಾ ಖಾನ್ ಬಗ್ಗೆ ಹೇಳುವುದಾದರೆ, ಬಾಲಿವುಡ್ ಮೇಕಪ್ ಕಲಾವಿದೆಯಾಗಿರುವ ಶುರಾ, ನಟಿ ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥಡಾನಿ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಅರ್ಬಾಜ್ ಮತ್ತು ಶುರಾ ನಡುವೆ 22 ವರ್ಷಗಳ ಅಂತರವಿದೆ. ಶುರಾ ಖಾನ್ ಈ ಹಿಂದೆ ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥಡಾನಿ ಅವರೊಂದಿಗೆ ಕೆಲಸ ಮಾಡಿದ್ದರು. ‘ಪಟ್ನಾ ಶುಕ್ಲಾ’ ಸಿನಿಮಾದ ಚಿತ್ರೀಕರಣದ ವೇಳೆ ಇಬ್ಬರೂ ಭೇಟಿಯಾಗಿದ್ದರಂತೆ. ಈ ವೇಳೆಯ ಪರಿಯಚ ಇದೀಗ ಮದುವೆ ಹಂತಕ್ಕೆ ತಂದು ನಿಲ್ಲಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)