More

    ಸ್ವಾಭಿಮಾನವಿದ್ದರೆ ಕೇಸ್ ಹಿಂಪಡೆಯಲಿ: ಭವಿಷ್ಯದಲ್ಲಿ ಸಂಘಟನೆಯಿಂದ ಯಾವುದೇ ಚುನಾವಣೆಗೆ ಸ್ಪರ್ಧೆ ಇಲ್ಲ

    ಬೆಂಗಳೂರು: ರಾಜ್ಯದಲ್ಲಿ ಈವರೆಗೆ ಅಧಿಕಾರ ನಡೆಸಿರುವ ಎಲ್ಲ ರಾಜಕೀಯ ಪಕ್ಷಗಳ ನೇತೃತ್ವದ ಸರ್ಕಾರಗಳು ಕನ್ನಡಪರ ಸಂಘಟನೆಗಳ ಮೇಲಿರುವ ಮೊಕದ್ದಮೆಗಳನ್ನು ಹಿಂಪಡೆಯುವುದಾಗಿ ಭರವಸೆ ನೀಡಿದ್ದವು. ಆದರೆ, ವಾಸ್ತವದಲ್ಲಿ ತಮ್ಮ ಪಕ್ಷಗಳ ಕಾರ್ಯಕರ್ತರು ಹಾಗೂ ಅಂಗಸಂಸ್ಥೆಗಳ ಮೇಲಿದ್ದ ಕೇಸ್​ಗಳನ್ನಷ್ಟೇ ವಾಪಸ್ ಪಡೆದಿವೆ. ಹಿಂದೆ ರೈತ ಚಳವಳಿ, ದಲಿತ ಚಳವಳಿಯನ್ನು ಹತ್ತಿಕ್ಕಿದ್ದ ಕನ್ನಡಿಗರು ಇರುವ ಪಕ್ಷಗಳೇ ಈಗ ಕನ್ನಡಪರ ಸಂಘಟನೆಗಳ ಕತ್ತು ಹಿಸುಕುವ ಕೆಲಸದಲ್ಲಿ ನಿರತವಾಗಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕರವೇ ಬೆಳ್ಳಿಹಬ್ಬದ ಆಚರಣೆ ಹೊಸ್ತಿಲಲ್ಲಿ ಸಂಘಟನೆ ನಡೆದುಬಂದ ಹಾದಿ, ಹೋರಾಟ ಹಾಗೂ ಭವಿಷ್ಯದಲ್ಲಿ ಸಮಾಜಮುಖಿ ಕಾರ್ಯದಲ್ಲಿ ಕನ್ನಡಿಗರ ಸೇವೆ ಮಾಡುತ್ತಲೇ ಹೋರಾಟವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುವ ಆಶಯವನ್ನು ಅವರು ‘ವಿಜಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದಾರೆ.

    ಜನಪರ ಸಂಘಟನೆಗಳು ಬೆಳೆದರೆ ತಮ್ಮ ಕುರ್ಚಿಗೆ ಆಪತ್ತು ಬರುತ್ತದೆ ಎಂಬ ಭಯ ರಾಜಕೀಯ ಪಕ್ಷ ಹಾಗೂ ಅವುಗಳ ನಾಯಕರಿಗೆ ಇದೆ. ಈ ಕಾರಣದಿಂದಲೇ ಹೋರಾಟಗಾರರನ್ನು ನಿರಂತರವಾಗಿ ಸದೆಬಡಿಯುವ ತಂತ್ರ ಅನುಸರಿಸಲಾಗುತ್ತಿದೆ. ಚುನಾವಣೆ ಬಂದಾಗಲಷ್ಟೇ ಕೇಸ್ ವಾಪಸ್ ತೆಗೆಸುವ ಭರವಸೆ ನೀಡಿದರೂ, ನಂತರ ನಮ್ಮತ್ತ ತಿರುಗಿಯೂ ನೋಡುವುದಿಲ್ಲ. ಬದಲಾಗಿ ಹೋರಾಟಗಾರರನ್ನು ತಣ್ಣಗಾಗಿಸಲು ಮೊಕದ್ದಮೆ ಹಾಕಿಸಿ ಜೈಲಿಗೆ ಅಟ್ಟುವ, ಕೋರ್ಟ್​ಗೆ ಅಲೆದಾಡಿಸುವ ಉಡುಗೊರೆ ನೀಡಲಾಗಿದೆ. ಈಗಲೂ ಕಾಲ ಮಿಂಚಿಲ್ಲ. ಸರ್ಕಾರಕ್ಕೆ ಸ್ವಾಭಿಮಾನ ಇದ್ದರೆ ನಾಡಿನ ನೆಲ, ಜಲ, ಗಡಿ ಹಾಗೂ ಭಾಷೆಯ ವಿಚಾರಕ್ಕಾಗಿ ಹೋರಾಟ ನಡೆಸಿರುವ ಎಲ್ಲ ಕನ್ನಡಪರ ಸಂಘಟನೆಗಳ ಮೇಲಿರುವ ಮೊಕದ್ದಮೆಗಳನ್ನು ಹಿಂಪಡೆಯಬೇಕು. ತಪ್ಪಿದರೆ ಇತಿಹಾಸದಲ್ಲಿ ಕಂಡುಕೇಳರಿಯದ ಉಗ್ರ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.

    ಪ್ರಸ್ತುತ ಕರವೇ ಕಾರ್ಯಕರ್ತರ ಮೇಲೆ ಒಟ್ಟು 1,332 ಮೊಕದ್ದಮೆ ಹೂಡಲಾಗಿದೆ. ನನ್ನ ಮೇಲೂ 48 ಕೇಸ್ ಹಾಕಲಾಗಿದೆ. ದೂರದ ಬೀದರ್, ಬೆಳಗಾವಿ ಇತ್ಯಾದಿ ಕಡೆಗಳಲ್ಲಿ ನಮ್ಮ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ ನನ್ನನ್ನು ಎ1 ಆರೋಪಿ ಆಗಿ ಮಾಡಲಾಗಿದೆ. ಇಂತಹ ನಿಯಮ ನಮ್ಮ ಕಾನೂನಿನ ಯಾವ ಪುಸ್ತಕದಲ್ಲಿ ಅಡಕವಾಗಿದೆ ಎಂಬುದನ್ನು ಪೊಲೀಸ್ ಇಲಾಖೆಯು ಜನರಿಗೆ ತಿಳಿಸಬೇಕು.

    ಕರವೇ ಹೋರಾಟದ ಮೂಲಕ ಸಂಘಟನೆಯ ರೂಪ ಪಡೆದಿದೆ. ರಾಜ್ಯದೆಲ್ಲೆಡೆ 14,882 ಶಾಖೆಗಳಿದ್ದು, ಲಕ್ಷಾಂತರ ಕಾರ್ಯಕರ್ತರಿಗೆ ಹೋರಾಟವೇ ಕನ್ನಡದ ಪೂಜೆಯಾಗಿದೆ. ಮುಂದೆಯೂ ನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಹೋರಾಟ ಮುಂದು ವರಿಸಲಾಗುವುದು. ಇನ್ನೂ 100 ಕೇಸ್ ಹಾಕಿದರೂ ನಾನು ಹೆದರುವುದಿಲ್ಲ. ದೇಹದಲ್ಲಿ ಕೊನೆಯ ಹನಿ ರಕ್ತ ಇರುವವರೆಗೂ ಹೋರಾಟ ಮಾಡುತ್ತಲೇ ಸಾವು ಬಯಸುವೆ. ಹೀಗಾಗಿ ಸಂಘಟನೆ ಮೇಲಿರುವ ಮೊಕದ್ದಮೆ ಹಿಂಪಡೆಯಲು ಸರ್ಕಾರವನ್ನು ಗೋಗರೆಯುವುದಿಲ್ಲ ಎಂದಿದ್ದಾರೆ.

    ಭರವಸೆಗಳನ್ನು ಈಡೇರಿಸಿ

    * ಕನ್ನಡಪರ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗೆ ರಾಜಧಾನಿಯಲ್ಲಿ 2 ಎಕರೆ ಜಮೀನು ಮಂಜೂರು ಮಾಡುವ ದಶಕದ ಹಿಂದಿನ ಪ್ರಸ್ತಾಪಕ್ಕೆ ಸರ್ಕಾರ ಸ್ಪಂದಿಸಲಿ.

    * ಕರವೇ ಹೋರಾಟಕ್ಕೆ ಕನ್ನಡ ಚಿತ್ರನಟರು ಕೈಜೋಡಿಸುತ್ತಿಲ್ಲ. ಈಗಲೂ ಬೆಂಬಲ ನೀಡದಿದ್ದರೆ ನಟರ ಚಿತ್ರವನ್ನು ವೀಕ್ಷಿಸದಂತೆ ಕನ್ನಡಿಗರಿಗೆ ಕರೆ ನೀಡಲಾಗುವುದು.

    * ಕನ್ನಡ ವಿರೋಧಿ ಧೋರಣೆ ಹೊಂದಿರುವ ಕೆಲ ಐಎಎಸ್/ಐಪಿಎಸ್ ಅಧಿಕಾರಿಗಳು ಲ್ಯಾಂಡ್ ಮಾಫಿಯಾದಲ್ಲಿ ಭಾಗಿಯಾಗಿರುವ ಬಗ್ಗೆ ಶೀಘ್ರದಲ್ಲೇ ಪುಸ್ತಕ ಹೊರತರಲಾಗುವುದು.

    * ರಾಜ್ಯದೆಲ್ಲೆಡೆ ಕನ್ನಡಿಗರ ಮೇಲೆ ಅನ್ಯ ರಾಜ್ಯದವರಿಂದ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ಸಂಘಟನೆಯು ಅಣಿಯಾಗುತ್ತಿದೆ.

    * ಕನ್ನಡ ಫಲಕ ಹಾಕದ ಮಾಲ್ ವಿರುದ್ಧ ನಡೆಸಿದ ಪ್ರತಿಭಟನೆಗಾಗಿ ಮುಂಬೈನಿಂದ ಬೆದರಿಕೆ ಕರೆ ಬಂತು. ಪೊಲೀಸರಿಗೆ ದೂರು ನೀಡಿದರೂ, ಈವರೆಗೂ ನನ್ನ ಬಳಿ ಮಾಹಿತಿ ಪಡೆದಿಲ್ಲ. ರಕ್ಷಣೆ ನೀಡಿರೆಂದು ಸರ್ಕಾರದ ಮುಂದೆ ಕೈಕಟ್ಟಿ ನಿಲ್ಲುವುದಿಲ್ಲ.

    ರಾಜಧಾನಿಯಲ್ಲಿ ಕನ್ನಡ ಚಳವಳಿ ಮೈಸೂರು ಬ್ಯಾಂಕ್ ಸರ್ಕಲ್​ಗೆ ಸೀಮಿತವಾಗಿದ್ದ ಕಾಲದಲ್ಲಿ (1999) ಉದಯವಾದ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟದ ಫಲವಾಗಿ ಇಂದು ಬೆಂಗಳೂರಿನಲ್ಲಿ ಕನ್ನಡ ವಾತಾವರಣ ಮೂಡಿದೆ. ಇದುವೇ ನಮ್ಮ ಸಂಘಟನೆಯ ಪ್ರಮುಖ ಸಾಧನೆ. ಮುಂದೆಯೂ ಸಮಾಜಮುಖಿ ಕಾರ್ಯದ ಮೂಲಕ ಕನ್ನಡ, ಕನ್ನಡಿಗರಿಗೆ ಎದುರಾಗುವ ಅನ್ಯಾಯದ ವಿರುದ್ಧ ಪ್ರಬಲ ಹೋರಾಟ ನಡೆಸಲು ಸಿದ್ಧ.

    ಚುನಾವಣೆಯಲ್ಲಿ ಸ್ಪರ್ಧೆ ಇಲ್ಲ
    ಕರವೇ ಕನ್ನಡಿಗರ ಜ್ವಲಂತ ಸಮಸ್ಯೆಗೆ ಸ್ಪಷ್ಟ ಪರಿಹಾರ ಒದಗಿಸಲು ರಾಜಕೀಯ ಪಕ್ಷವಾಗಿ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿತ್ತು. ಕಳೆದ ಬಿಬಿಎಂಪಿ ಚುನಾವಣೆಗೆ ವೇದಿಕೆಯ 9 ಮಂದಿಯನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿದ್ದೆ. ಮೂರು ಕೋಟಿ ರೂ. ಸಾಲವನ್ನು ಶೇಕಡ 5 ಬಡ್ಡಿಯಂತೆ ಹಣ ತಂದು ಖರ್ಚು ಮಾಡಿದ್ದೆ. ಆದರೆ, ಗೆಲುವು ಸಿಗಲಿಲ್ಲ. ಭಾಷೆ ವಿಚಾರದಲ್ಲಿ ಪೊಲೀಸರಿಂದ ಲಾಠಿ ಏಟು, ಬೂಟಿನೇಟಿಗೆ ಒಳಗಾಗಿ ಚಳವಳಿ ಕಟ್ಟಿದ್ದು ಏಕೆಂಬ ಪ್ರಶ್ನೆ ಉದ್ಭವಿಸಿತು. ಜತೆಗೆ ಬೆಂಗಳೂರಿನ ವಿಧಾನಸಭಾ ಕ್ಷೇತ್ರವೊಂದರಲ್ಲಿ ಸ್ಪರ್ಧಿಸಲು 50 ಕೋಟಿ ರೂ. ಬೇಕು. ಇಷ್ಟೊಂದು ದೊಡ್ಡ ಮೊತ್ತವನ್ನು ಹೂಡುವ ಶಕ್ತಿ ಇಲ್ಲದ ಕಾರಣ ಇನ್ನು ಮುಂದೆ ಯಾವುದೇ ಚುನಾವಣೆಯಲ್ಲೂ ಸಂಘಟನೆ ಪಾಲ್ಗೊಳ್ಳದಿರಲು ನಿರ್ಧರಿಸಲಾಗಿದೆ.

    ಸಿಲಿಂಡರ್ ಸ್ಫೋಟ ಪ್ರಕರಣ: ಗಂಭೀರವಾಗಿ ಗಾಯಗೊಂಡಿದ್ದ ತಂದೆ-ಮಗು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts