More

    ಸಂಪಾದಕೀಯ: ಭಯಮುಕ್ತ ವಾತಾವರಣ ಅಗತ್ಯ

    ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಪ್ರತಿನಿತ್ಯವೂ ಕೊಲೆ, ಅತ್ಯಾಚಾರ ಮತ್ತಿತರ ಗಂಭೀರ ಅಪರಾಧ ಪ್ರಕರಣಗಳು ಸಾಮಾನ್ಯ ಎಂಬಂತಾಗಿಬಿಟ್ಟಿವೆ. ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿ ನೇಹಾಳನ್ನು ಹಾಡಹಗಲೇ ಹತ್ಯೆ ಮಾಡಿದ ಘಟನೆ ಜನಮಾನಸದಿಂದ ಮರೆಯಾಗುವ ಮುನ್ನವೇ ಅಂಜಲಿ ಎಂಬ ಯುವತಿಯ ಮನೆಗೆ ನುಗ್ಗಿ ಕೊಲೆ ಮಾಡಿರುವ ಘಟನೆ ರಾಜ್ಯದೆಲ್ಲೆಡೆ ಸುದ್ದಿಯಾಗಿದೆ. ಈ ಮಧ್ಯೆ, ರಾಜ್ಯ ರಾಜಧಾನಿಯೂ ಸೇರಿದಂತೆ ವಿವಿಧ ಭಾಗಗಳಲ್ಲಿ ಸಂಭವಿಸಿರುವ ಕೊಲೆ ಪ್ರಕರಣಗಳಿಗೇನೂ ಕೊರತೆ ಇಲ್ಲ. ಇದು ಊಹೆ ಅಲ್ಲ. ಅಧಿಕೃತ ಅಂಕಿ ಅಂಶಗಳೇ ಇದನ್ನು ದೃಢಪಡಿಸುತ್ತಿವೆ.

    ರಾಜ್ಯದ ಅಪರಾಧ ದಾಖಲೆಗಳ ಸಂಸ್ಥೆ (ಸ್ಟೇಟ್ ಕ್ರೖೆಂ ರೆಕಾರ್ಡ್ ಬ್ಯೂರೋ- ಎಸ್​ಸಿಆರ್​ಬಿ) ನೀಡಿರುವ ಮಾಹಿತಿ ಪ್ರಕಾರ, 2022ರಿಂದ 2024ರ ಏಪ್ರಿಲ್​ವರೆಗೆ ರಾಜ್ಯದಲ್ಲಿ 3095 ಕೊಲೆಗಳು ವರದಿಯಾಗಿವೆ. 2024ರಲ್ಲಿ ಆರಂಭದ 4 ತಿಂಗಳಲ್ಲೇ 430 ಹತ್ಯೆ, 1262 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, 198 ಅತ್ಯಾಚಾರ ನಡೆದಿವೆ. ಕಳೆದ 3 ವರ್ಷಗಳಲ್ಲಿ 8310 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, 1344 ಅತ್ಯಾಚಾರ ನಡೆದಿವೆ. ಇವೆಲ್ಲವೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ವರದಿಯಾಗಿರುವ ಪ್ರಕರಣಗಳು. ಇನ್ನು ಠಾಣೆ ಮೆಟ್ಟಿಲು ಏರದೇ, ವರದಿಯಾಗದೇ ಇರುವ ಪ್ರಕರಣಗಳು ಎಷ್ಟಿವೆಯೋ. ಇದಲ್ಲದೆ, ಸೈಬರ್ ವಂಚನೆ, ಹಲ್ಲೆ, ಸುಲಿಗೆಯಂತಹ ಪ್ರಕರಣಗಳೂ ಪ್ರತಿನಿತ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇವೆ.

    ಇದೆಲ್ಲವನ್ನೂ ಗಮನಿಸಿದರೆ ಅಪರಾಧಿಗಳಿಗೆ ಪೊಲೀಸರ ಭಯವೇ ಇಲ್ಲವೇನೋ ಎನಿಸುತ್ತದೆ. ಅಪರಾಧ ಪ್ರಕರಣ ಎಲ್ಲೇ ನಡೆದರೂ ಈಗಿನ ತಂತ್ರಜ್ಞಾನದ ಯುಗದಲ್ಲಿ ಅದರ ಮಾಹಿತಿ-ವಿಡಿಯೋಗಳು ಕೆಲವೇ ನಿಮಿಷಗಳಲ್ಲಿ ಸಾಂಪ್ರದಾಯಿಕ ಮಾಧ್ಯಮ ಮತ್ತು ನವ ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಲುಪುತ್ತವೆ. ಕೆಲವು ದುಷ್ಕರ್ವಿುಗಳ ಕ್ರೌರ್ಯ ಎಷ್ಟು ಭೀಕರವಾಗಿರುತ್ತದೆಯೆಂದರೆ ಅದು ಸಾಮಾನ್ಯಜನರಲ್ಲಿ ಭೀತಿಯನ್ನು ಉಂಟು ಮಾಡುವಂತಿರುತ್ತದೆ. ಇಂತಹ ವಾತಾವರಣದಲ್ಲಿ ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸಬೇಕೇ ಬೇಡವೇ ಎಂಬ ಬಗ್ಗೆ ಯೋಚಿಸುವಂತಾಗುತ್ತದೆ. ಇಂತಹ ಸಂದರ್ಭದಲ್ಲಿ ಪೊಲೀಸರು ಒಂದೊಂದು ಪ್ರಕರಣದಲ್ಲೂ ಕೈಗೊಳ್ಳುವ ಕ್ರಮಗಳು, ಅಪರಾಧ ಪ್ರವೃತ್ತಿಯ ಜನರಲ್ಲಿ ಕಾನೂನಿನ ಬಗ್ಗೆ ಭಯ ಮೂಡಿಸುವಂತಿರಬೇಕು.

    ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ದೃಢಪಟ್ಟರೆ ಮಾತ್ರ ಅಪರಾಧಿಗಳಲ್ಲಿ ಭಯ ಮೂಡಲು ಸಾಧ್ಯ. ಅಪರಾಧ ನಡೆದ ನಂತರ ಅದನ್ನು ಭೇದಿಸುವ ಸಾಹಸಕ್ಕೆ ಕೈಹಾಕುವ ಬದಲು, ನಡೆಯದಂತೆ ನೋಡಿಕೊಳ್ಳುವುದು ಉತ್ತಮ. ಅದಕ್ಕಾಗಿ ಪೊಲೀಸರ ಬೀಟ್ ವ್ಯವಸ್ಥೆ ಬಲಗೊಳ್ಳಬೇಕು. ರಸ್ತೆರಸ್ತೆಯಲ್ಲೂ ಆಗಾಗ ಪೊಲೀಸರು ಮತ್ತು ಅವರ ವಾಹನಗಳು ಕಾಣಿಸುತ್ತಿದ್ದರೆ ಅಪರಾಧಿಗಳಲ್ಲಿ ಭಯ ಬಿತ್ತಲು ಮತ್ತು ಸಾಮಾನ್ಯ ಜನರಲ್ಲಿ ಸುರಕ್ಷತೆಯ ಭಾವನೆ ಮೂಡಿಸಲು ಸಹಾಯಕವಾಗುತ್ತದೆ. ಜನರಿಗೆ ಭಯಮುಕ್ತ ವಾತಾವರಣ ನಿರ್ಮಾಣ ಮಾಡುವಲ್ಲಿ ರಾಜ್ಯ ಸರ್ಕಾರದ ಪಾತ್ರ ಮಹತ್ವದ್ದು. ಅದರಲ್ಲೂ ಆಂತರಿಕ ಭದ್ರತೆಯ ಹೊಣೆ ಹೊತ್ತ ಸಚಿವರು ಮತ್ತು ಅಧಿಕಾರಿಗಳ ಬದ್ಧತೆ ಬಹುಮುಖ್ಯವಾಗುತ್ತದೆ. ಕಠಿಣಾತಿಕಠಿಣ ಕ್ರಮಗಳೊಂದಿಗೆ ಆ ಜವಾಬ್ದಾರಿಯನ್ನು ಅವರು ನಿಭಾಯಿಸಬೇಕಾಗಿದೆ.

    ಡಿಕೆಶಿಯಿಂದ 100 ಕೋಟಿ ರೂಪಾಯಿ ಆಫರ್: ಹೊಸ ಬಾಂಬ್‌ ಸಿಡಿಸಿದ ದೇವರಾಜೇಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts