More

    ಚರಾಚರಗಳಲ್ಲೂ ದೇವ ನೆಲೆ ಕಾಣುವಾತನ ಮನೆಯೇ ಮಂದಿರ

    ಚರಾಚರಗಳಲ್ಲೂ ದೇವ ನೆಲೆ ಕಾಣುವಾತನ ಮನೆಯೇ ಮಂದಿರ ಮನೆಯ ಸಂಸಾರದಲಿ ವಾಸವಿರುತಾಗಾಗ|
    ನೆನೆದು ನೀಂ ದೇಗುಲಕೆ ಪೋಗಿಬರುವಂತೆ||
    ದಿನವೆಲ್ಲ ದೇವಸನ್ನಿಧಿಯೊಳಿರುತಾಗಾಗ|
    ಮನೆಗೆ ಬರುವನವೊಲಿರು-ಮಂಕುತಿಮ್ಮ||702||

    ಮನೆಯ ಸಂಸಾರದೊಳಗೆ ವಾಸವಾಗಿರುತ್ತಾ ಆಗಾಗ ದೇವರನ್ನು ನೆನಪಿಸಿಕೊಂಡು ದೇಗುಲಕ್ಕೆ ಹೋಗಿಬರುವ ಹಾಗೆಯೇ, ದಿನ ಪೂರ್ತಿ ದೇವರ ಸಾನ್ನಿಧ್ಯದಲ್ಲಿ ಇರುತ್ತಾ ಆಗೀಗ ಮನೆಗೆ ಬರುವವನ ಹಾಗೆ ಇರು ಎನ್ನುತ್ತದೆ ಈ ಕಗ್ಗ. ಸಂಸಾರ ಪೋಷಣೆಯಲ್ಲಿ ನಿರತರಾದ ಲೌಕಿಕರು ತಮ್ಮ ತಾಪತ್ರಯ, ಅವಸರಗಳ ನಡುವೆ ಕೆಲವೊಮ್ಮೆ ನೆನಪು ಮಾಡಿಕೊಂಡು ದೇಗುಲಕ್ಕೆ ಹೋಗಿಬರುವುದುಂಟು. ಹೀಗೆ ಆಗೀಗ ದೇಗುಲಕ್ಕೆ ಭೇಟಿ ಕೊಡುವುದರ ಹಿಂದೆ ಯಾವುದೋ ಒಂದು ಸ್ವಾರ್ಥಾಪೇಕ್ಷೆಯನ್ನು ಈಡೇರಿಸಿಕೊಳ್ಳುವ ಉದ್ದೇಶವಿರುತ್ತದೆ. ಬಯಸಿದ್ದೆಲ್ಲವೂ ಈಡೇರಲಿ ಎಂದೋ, ಮಾಡುವ ಪ್ರಯತ್ನಗಳು ಫಲ

    ಪ್ರದವಾಗಲಿ ಎಂದೋ, ಲೌಕಿಕ ಪ್ರಗತಿಯನ್ನು ಉದ್ದೇಶಿಸಿಯೇ ದೇಗುಲಕ್ಕೆ ಭೇಟಿ ನೀಡುತ್ತಾರೆ, ಯಾಚಿಸುತ್ತಾರೆ. ಹಾಗೆಯೇ ದೇವರ ಬಗೆಗಿನ ಭಯದಿಂದ ಹೋಗುವವರೂ ಇದ್ದಾರೆ. ತಮ್ಮ ಕುಕೃತ್ಯಗಳಿಂದ ಮತ್ತು ವಂಚಕ ಮನಸ್ಸಿನಿಂದಾಗಿ ಬೆಳೆದ ಅಪರಾಧಿ ಪ್ರಜ್ಞೆಯನ್ನು ನಿವಾರಿಸಿಕೊಳ್ಳಲು ಭಯ-ಭಕ್ತಿಯಿಂದ ದೇಗುಲಕ್ಕೆ ಹೋಗುವವರಿದ್ದಾರೆ. ದೇವಸ್ಥಾನಕ್ಕೆ ಹೋಗದೆ ಇದ್ದರೆ ದೇವರು ಮುನಿಸಿಕೊಳ್ಳಬಹುದು ಎಂಬ ಕಲ್ಪನೆಯೂ ಇಲ್ಲದಿಲ್ಲ. ಆಧುನಿಕ ಯುಗದಲ್ಲಂತೂ ದೇಗುಲಗಳು ಪ್ರವಾಸಿ ತಾಣಗಳಾಗಿವೆ. ದೇಗುಲದಲ್ಲೂ ಬಾಳಿನ ಗೋಳನ್ನು,ಗೆಲುವುಗಳನ್ನು ಮೆಲುಕು ಹಾಕುವುದು ನಡೆಯುತ್ತದೆ. ಇದಕ್ಕೆ ಹೊರ ತಾಗಿ ನಿಜ ಭಕ್ತಿಯಿಂದ, ಆತ್ಮಾನಂದವನ್ನು ಅನುಭವಿಸುವುದಕ್ಕಾಗಿ ದೇಗುಲಕ್ಕೆ ಹೋಗುವವರು ಬಹಳ ವಿರಳ. ಸಂಸಾರಿಕ ವಿಚಾರಗಳಲ್ಲಿ ಮುಳುಗಿ ದೇವರ ನಿಜ ಮಹಿಮೆಯನ್ನು ಮರೆತವರೆ ಹೆಚ್ಚು.

    ಇದರರ್ಥ ಸಂಸಾರಸ್ಥನು ಕರ್ಮದಿಂದ ವಿಮುಖನಾಗ ಬೇಕೆಂದಲ್ಲ. ಕರ್ಮವೆಂದರೆ ಲೋಕವ್ಯವಹಾರ. ಲೋಕದಿಂದ ಪಡೆ ಯುವ ಮತ್ತು ತನ್ನಿಂದಾದಷ್ಟನ್ನು ಕೊಡುವ ಕ್ರಿಯೆ. ಪ್ರತಿಯೊಬ್ಬರಿಗೂ ಲೋಕಜೀವಿತದಲ್ಲಿ ಅನೇಕ ಕರ್ತವ್ಯಗಳು ವಿಧಿಸಲ್ಪಟ್ಟಿವೆ. ಅವುಗಳನ್ನು ಪೂರ್ತಿಗೊಳಿಸುವ ಸಂದರ್ಭದಲ್ಲಿ ವ್ಯಕ್ತಿಯು ಕಾಮ, ಕ್ರೋಧ, ಮೋಹಗಳೆಂಬ ಆರು ಬಗೆಯ ಭಾವಗಳ ಪ್ರಭಾವಕ್ಕೆ ಒಳಗಾಗುತ್ತಾನೆ. ಪ್ರಕೃತಿ ಸಹಜವಾದ ತ್ರಿಗುಣಗಳು ಏರುಪೇರಾಗುತ್ತಾ ಮನಸ್ಸನ್ನು ಹದ ತಪ್ಪಿಸುತ್ತವೆ. ಇದರಿಂದಾಗಿ ಆಸೆಗಳ ಮಾಯಾಜಾಲಕ್ಕೆ ಮನುಜ ಸಿಲುಕಿಕೊಳ್ಳುತ್ತಾನೆ. ನಾನು ಎನ್ನುವ ಲೌಕಿಕ ಪರಿಧಿಯೊಳಗೆ ಗಿರಕಿ ಹೊಡೆಯುತ್ತಾನೆ. ಈ ಸಂದರ್ಭದಲ್ಲಿ ಭಯ, ಆತಂಕ ಅವನನ್ನು ಪದೇಪದೆ ಕಾಡುತ್ತದೆ. ತಾನು ಬಗೆದಂತೆ ಆಗದೆ ಹೋದರೆ ಎಂಬ ಭಯಕ್ಕೆ ಬಿದ್ದಾಗ ಆತನಿಗೆ ದೇವರ ನೆನಪಾಗುತ್ತದೆ. ದೇವರು ಕಾಪಾಡುತ್ತಾನೆ ಎಂಬ ನಂಬಿಕೆಯಿಂದ ಕಾರ್ಯೋನ್ಮುಖನಾಗುತ್ತಾನೆ. ಕೆಲಸದ ಒತ್ತಡ, ಸೋಲುವ ಭಯ, ನೆನೆದಂತೆ ನಡೆಯದಿದ್ದರೆ ಎಂಬ ಆತಂಕವನ್ನು ಹೋಗಲಾಡಿಸಿಕೊಳ್ಳಲು ದೇವರು, ದೇವಸ್ಥಾನ, ವಿಶ್ವಾಸವು ಅವಶ್ಯಕ. ಆದರೆ ಇದರಿಂದ ಲೌಕಿಕ ಪ್ರಗತಿಯಾಗಬಹುದೇ ಹೊರತು ವ್ಯಕ್ತಿತ್ವ ವಿಕಸನವಾಗದು. ಜೀವನದ ಅಲೆಗಳಲ್ಲಿ ಮುಳುಗೇಳುತ್ತಾ ಸಾಗುವುದಾಗುತ್ತದೆಯೇ ಹೊರತು ಆಚೆ ದಡವನ್ನು ಸೇರಲಾಗದು. ಆತ್ಮೋದ್ಧಾರವು ಸಾಧ್ಯವಾಗದು.

    ಜೀವದೆಶೆಯನ್ನು ಪಡೆದು ಪರಮಾತ್ಮನತ್ತ ಯಾತ್ರೆ ಹೊರಟಿರುವ ಆತ್ಮಕ್ಕೆ ಕರ್ಮದೋಷಗಳಿಂದ, ಋಣದ ಪಾಶಗಳಿಂದ ಮುಕ್ತಿಯನ್ನು ಪಡೆಯಲು ಜೀವನವು ಒಂದು ಅವಕಾಶ. ಆತ್ಮದ ಪರಮೋದ್ದೇಶವು ಈಡೇರಬೇಕೆಂದರೆ ಅದಕ್ಕೆ ಪೂರಕವಾದ ಸಂದರ್ಭಗಳು ಒದಗಿಬರಬೇಕು. ಮನುಜನಿಗೆ ವಿಶೇಷ ಶಕ್ತಿಯಾಗಿ ಪ್ರಾಪ್ತವಾಗಿರುವ ವಿವೇಕವು ಆತನನ್ನು ಆತ್ಮೋದ್ಧಾರದತ್ತ ಕೊಂಡೊಯ್ಯಬೇಕು. ಅದಕ್ಕೆ ಮಾಡಬೇಕಾದುದೇನು? ಮನೆಯ ಸಂಸಾರದಲ್ಲಿ ನಿರತನಾಗಿರುತ್ತಾ ಯಾವತ್ತೋ ಒಂದು ದಿನ ದೇವ ಸನ್ನಿಧಿಗೆ ಹೋಗಿ ಬರುವಂತೆಯೇ ದಿನವಿಡೀ ದೇವರ ಸಾನ್ನಿಧ್ಯದಲ್ಲಿ ಇರುತ್ತಾ, ಆಗೀಗ ತನ್ನ ಮನೆಗೆ ಹೋಗಿ ಬರುವವನ ಹಾಗೆ ಬಾಳಬೇಕು. ಅಂದರೆ ಸಂಸಾರದಿಂದ ವಿರಕ್ತನಾಗಿ, ಸಂನ್ಯಾಸಿಯಾಗಬೇಕು ಎಂದಲ್ಲ. ತನ್ನ ನಡೆ-ನುಡಿ, ಕೆಲಸ-ಕಾರ್ಯ, ಜೀವನದ ಪ್ರತಿ ಕ್ಷಣಗಳನ್ನೂ ಪರಮಾತ್ಮನಿಗೆ ಅರ್ಪಿಸಿ, ಎಲ್ಲವೂ ದೇವರದ್ದು, ಅವನೇ ಜೊತೆಗಿದ್ದು ಮುನ್ನಡೆಸುತ್ತಿದ್ದಾನೆ ಎಂಬ ಸಂಪೂರ್ಣ ಶರಣಾಗತ ಭಾವದಿಂದ ಬಾಳಬೇಕು, ನಿರ್ವೇಹಿಯಾ ಗಿರ ಬೇಕು. ಕಮ್ಮಾರನು ಕಬ್ಬಿಣವನ್ನು ಕಾಯಿಸಿ, ಅದಕ್ಕೆ ಏಟುಗಳನ್ನು ನೀಡಿ ತನಗೆ ಬೇಕಾದ ಆಕಾರಕ್ಕೆ ತರುವಂತೆಯೇ ಕೌಟುಂಬಿಕ ಕ್ಲೇಶ-ನಾಶಗಳು ವ್ಯಕ್ತಿಯ ದೌರ್ಬಲ್ಯಗಳನ್ನು ಕಳಚುತ್ತವೆ. ಸಮಷ್ಠಿಯ ಹಿತಕ್ಕಾಗಿ ಶ್ರಮಿಸುವ, ಋಣಾತ್ಮಕ ಗುಣಗಳನ್ನು ಕಳೆದುಕೊಳ್ಳುವ ಪ್ರಕ್ರಿಯೆಯಲ್ಲಿ ಆತ್ಮೋನ್ನತಿಯು ಸಾಧ್ಯವಾಗುತ್ತದೆ. ಹಿತಮಿತವಾದ ಆಸೆ, ಅಮಿತ ಜೀವನೋತ್ಸಾಹ, ಸಹಜ ಸರಳ ನಡವಳಿಕೆಗಳೊಂದಿಗೆ ಎಲ್ಲರೊಳಗಿದ್ದೂ ಇಲ್ಲದಂತೆ, ಮುಟ್ಟಿಯೂ ಮುಟ್ಟದಂತೆ, ಕರ್ತವ್ಯವನ್ನು ಮಾಡಿಯೂ ಫಲಾಪೇಕ್ಷೆ ಇಲ್ಲದಿರುವ, ಸಕಲ ಚರಾಚರ ಗಳಲ್ಲೂ ದೇವ ನೆಲೆಯನ್ನು ಕಾಣುತ್ತಾ ಸದಾ ಪ್ರಫುಲ್ಲಿತನಾಗಿ ಬದುಕಬಲ್ಲ ಎತ್ತರಕ್ಕೆ ಏರುವುದು ನಿಜವಾದ ಸಾಧನೆ. ಈ ನಿಟ್ಟಿನಲ್ಲಿ ಯೋಚಿಸಿ ದರೂ ಸಾಕು, ಮನೆಯೇ ಮಂದಿರವಾಗುತ್ತದೆ, ಮನದಲ್ಲಿ ಶರಣಾಗತ ಭಾವವು ಜಾಗೃತವಾಗುತ್ತದೆ.

    ಡಿಕೆಶಿಯಿಂದ 100 ಕೋಟಿ ರೂಪಾಯಿ ಆಫರ್: ಹೊಸ ಬಾಂಬ್‌ ಸಿಡಿಸಿದ ದೇವರಾಜೇಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts