ಅಪ್ಪ-ತಾತನ ಹೆಸರು ಗೊತ್ತಿದ್ದರೆ, ಅವರ ಬಗ್ಗೆಯೂ ಆರೋಪ ಮಾಡುತ್ತಿದ್ದರೇನೋ?

Abhinav - Arbaaz
Published on

ಬಾಲಿವುಡ್​ನಲ್ಲಿ ಭಲಾಡ್ಯರು ಹೇಗೆ ಹೊಸಬರನ್ನು ತುಳಿದು ಬಿಸಾಡುತ್ತಾರೆ ಎಂದು ಮಂಗಳವಾರವಷ್ಟೇ ದಬಾಂಗ್​ ಖ್ಯಾತಿಯ ಅಭಿನವ್​ ಕಶ್ಯಪ್​ ಹೇಳಿಕೊಂಡಿದ್ದರು. ತಾವು ಸಹ ಅದೇ ತರಹ ನಿರಂತರವಾಗಿ ತುಳಿತಕ್ಕೊಳಗಾಗಿದ್ದು, ತಮ್ಮ ಅವನತಿಗೆ ಸಲ್ಮಾನ್​ ಕುಟುಂಬದವರೇ ಕಾರಣ ಎಂದು ಅಭಿಪ್ರಾಯ ಪಟ್ಟಿದ್ದರು. ಈಗ ಅಭಿನವ್​ ಮಾತಿಗೆ ಸಲ್ಮಾನ್​ ಸಹೋದರ ಖಡಕ್​ ಉತ್ತರ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅರ್ಬಾಜ್​ ಖಾನ್​, 2012ರಿಂದ ಅಭಿನವ್​ ಅವರನ್ನು ಭೇಟಿಯಾಗಿಲ್ಲ ಎಂದು ಹೇಳಿದ್ದಾರ. ದಬಾಂಗ್​ ಯಶಸ್ಸಿನ ನಂತರ ಅಭಿನವ್​, ನಮ್ಮ ಸಂಸ್ಥೆಗೆ ದಬಾಂಗ್​ 2 ಚಿತ್ರವನ್ನು ಮಾಡಿಕೊಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ನಾವು ವೃತ್ತಿಪರವಾಗಿ ದೂರಾಗಿದ್ದೇವೆ. ಅಷ್ಟೇ ಅಲ್ಲ, ಅವರ ಜತೆಗೆ ಮಾತಾಡಿದ್ದೂ ಇಲ್ಲ. ಅಷ್ಟಾದರೂ ಅವರು ನಮ್ಮ ಮೇಲೇಕೆ ಆರೋಪ ಮಾಡುತ್ತಿದ್ದಾರೋ ಗೊತ್ತಿಲ್ಲ. ಈ ಕುರಿತು ನಾವು ಕಾನೂನು ರೀತಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಬರೀ ಅರ್ಬಾಜ್​ ಖಾನ್​ ಅಷ್ಟೇ ಅಲ್ಲ, ಸಲ್ಮಾನ್​ ತಂದೆ ಸಲೀಮ್​ ಖಾನ್​ ಸಹ ಅಭಿನವ್​ ವಿರುದ್ಧ ಕಿಡಿಕಾರಿದ್ದಾರೆ. ನಮಗೆ ಮಾಡುವುದಕ್ಕೆ ಬೇರೆ ಕೆಲವಿಲ್ಲವೇ? ನಾವ್ಯಾಕೆ ಅವರನ್ನು ತುಳಿಯಬೇಕು? ಅವರು ದಬಾಂಗ್​ ನಂತರ ಎಂತಹ ಸಿನಿಮಾ ಮಾಡಿದ್ದಾರೆ ಎಂದು ಮೊದಲು ಹೇಳಿ, ಆ ನಂತರ ಬೆರಳು ಮಾಡಿ ತೋರಿಸಬೇಕು ಎಂದು ಸಲೀಮ್​ ಖಾನ್​ ಹೇಳಿದ್ದಾರೆ.

ಇನ್ನು ತಮ್ಮ ಕುಟುಂಬದ ಬಗ್ಗೆ ಅಭಿನವ್​ ಆರೋಪ ಮಾಡಿದ್ದರ ಕುರಿತಾಗಿ ಮಾತನಾಡಿರುವ ಅವರು, ಪುಣ್ಯಕ್ಕೆ ಅವರಿಗೆ ನಮ್ಮ ಹೆಸರುಗಳು ಮಾತ್ರ ಗೊತ್ತಿದೆ. ಅವರಿಗೆ ನಮ್ಮಪ್ಪ-ತಾತನ ಹೆಸರು ಗೊತ್ತಿದ್ದರೆ, ಅವರು ಸಹ ತುಳಿಯುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದರೇನೋ? ಅವರು ಏನಾದರೂ ಮಾತಾಡಿಕೊಳ್ಳಲಿ. ನನಗೆ ಅವರ ಬಗ್ಗೆ ಮಾತನಾಡುವುದಕ್ಕೆ ಇಷ್ಟ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net