

ಭಾರತೀಯ ಚಿತ್ರರಂಗದಲ್ಲಿ ಲ್ಯಾಂಡ್ಮಾರ್ಕ್ ಸಿನಿಮಾ ಎಂದೇ ಪರಿಗಣಿಸಲಾಗಿರುವ ಚಿತ್ರ ಎಂದರೆ ಅದು ಮಣಿರತ್ನಂ ನಿರ್ದೇಶನದ 'ರೋಜ'. ಈ ಚಿತ್ರ ಬಿಡುಗಡೆಯಾಗಿ 28 ವರ್ಷಗಳೇ ಆಗಿವೆ. ಆದರೆ, ಈಗಲೂ ಈ ಚಿತ್ರದ ನೆನಪು ಮತ್ತು ಹಾಡುಗಳು ಜನರ ಮನಸ್ಸಿನಲ್ಲಿ ಹಚ್ಚಹಸುರಾಗಿದೆ.
ಈಗ್ಯಾಕೆ ಈ ವಿಷಯವೆಂದರೆ, ಆ ಚಿತ್ರದಲ್ಲಿ ಗಂಡ-ಹೆಂಡತಿಯಾಗಿ ನಟಿಸಿದ್ದ ಅರವಿಂದ್ ಸ್ವಾಮಿ ಮತ್ತು ಮಧು, ಆ ನಂತರ ಯಾವುದೇ ಚಿತ್ರದಲ್ಲೂ ಜತೆಯಾಗಿ ನಟಿಸಿರಲಿಲ್ಲ. ಇದೀಗ 28 ವರ್ಷಗಳ ನಂತರ ಅವರಿಬ್ಬರೂ, ಮತ್ತೊಮ್ಮೆ ಹೊಸ ಚಿತ್ರವೊಂದರಲ್ಲಿ ಗಂಡ-ಹೆಂಡತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಆ ಚಿತ್ರ ಯಾವುದು ಗೊತ್ತಾ? 'ತಲೈವಿ'. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನ್ನವಾಧರಿಸಿದ ಈ ಚಿತ್ರದಲ್ಲಿ ಕಂಗನಾ ಅವರು ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇನ್ನು ಅರವಿಂದ್ ಸ್ವಾಮಿ ಅವರು ಎಂ.ಜಿ. ರಾಮಚಂದ್ರನ್ ಅವರ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ಪತ್ನಿ ಜಾನಕಿ ರಾಮಚಂದ್ರನ್ ಆಗಿ ಮಧೂ ಕಾಣಿಸಿಕೊಳ್ಳುತ್ತಿದ್ದಾರೆ.
'ತಲೈವಿ' ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಚೆನ್ನೈನಲ್ಲಿ ಒಂದು ಹಂತದ ಚಿತ್ರೀಕರಣದಲ್ಲಿ ಕಂಗನಾ ಭಾಗವಹಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ್ದ ಅವರು, ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಸದ್ಯದಲ್ಲೇ ಸಂಪೂರ್ಣವಾಗಲಿದೆ ಎಂದು ತಿಳಿಸಿದ್ದಾರೆ.