ಮೆನಾರ್ಕೆಗೆ ಮೆಚ್ಚುಗೆ; ಚಿತ್ರೋತ್ಸವಗಳಲ್ಲಿ ಗಮನ ಸೆಳೆಯುತ್ತಿರುವ ಕನ್ನಡದ ಕಿರುಚಿತ್ರ..

Menarchy
ಚಿನ್ಮಯಿ ಮಹೇಶ್, ಕೇತನಾ ಮಂಜುನಾಥ್
Published on

ಬೆಂಗಳೂರು: ಮಹಿಳೆಯರು ಅನುಭವಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ಹಲವು ಕಿರುಚಿತ್ರಗಳು ಬಿಡುಗಡೆಯಾಗಿವೆ. ಇದೀಗ ಯೂಟ್ಯೂಬ್​ನ ಕೆಆರ್​ಜಿ ಕನೆಕ್ಟ್್ಸ ಚಾನಲ್​ನಲ್ಲಿ ‘ಮೆನಾರ್ಕೆ’ ಎಂಬ ಕಿರುಚಿತ್ರವು ತನ್ನ ವಿಭಿನ್ನ ಕಥಾವಸ್ತುವಿನಿಂದ ಸುದ್ದಿಯಾಗುತ್ತಿದೆ.

25 ನಿಮಿಷಗಳ ‘ಮೆನಾರ್ಕೆ’ ಕಿರುಚಿತ್ರವು, ಹೆಣ್ಮಕ್ಕಳು ಅನುಭವಿಸುವ ಮುಟ್ಟಿನ ಕುರಿತದ್ದಾಗಿದೆ. ಹೆಣ್ತನದಲ್ಲಿ ಆಗುವ ಒಂದು ಮುಖ್ಯ ಬದಲಾವಣೆಯ ಸೂಕ್ಷ್ಮ ವಿಷಯವನ್ನು ಈ ಕಿರುಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಹೆಣ್ಣನ್ನು ಗೌರವಿಸಿ, ಹೆಣ್ತನವನ್ನು ಗೌರವಿಸಿ ಎಂಬ ಸಂದೇಶವನ್ನು ಸಾರುವ ಈ ಕಿರುಚಿತ್ರವನ್ನು ಪೃಥ್ವಿ ಕುಣಿಗಲ್ ಬರೆದು ನಿರ್ದೇಶನ ಮಾಡಿದರೆ, ಖ್ಯಾತ ಬಿಲಿಯರ್ಡ್ಸ್ ಆಟಗಾರ್ತಿ ವರ್ಷಾ ಸಂಜೀವ್ ತಮ್ಮ ಗೋಲ್ಡಿ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ವರ್ಷಾ ಇದಕ್ಕೂ ಮುನ್ನ ಶ್ವೇತಾ ಶ್ರೀವಾತ್ಸವ್ ಅಭಿನಯದ ‘ಹೋಪ್’ ಎಂಬ ಚಿತ್ರವನ್ನು ನಿರ್ವಿುಸಿದ್ದರು.

‘ಮೆನಾರ್ಕೆ’ ಚಿತ್ರದಲ್ಲಿ ಕೇತನಾ ಮಂಜುನಾಥ್, ಚಿನ್ಮಯಿ ಮಹೇಶ್, ಆರ್​ಜೆ ಪ್ರಿಯಾಂಕಾ, ಆಶಾ ಗೌಡ ಮುಂತಾದವರು ಅಭಿನಯಿಸಿದ್ದು, ಈಗಾಗಲೇ ಈ ಕಿರುಚಿತ್ರವು ಜಗತ್ತಿನಾದ್ಯಂತ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಈ ಪೈಕಿ ಬಾಲನಟಿ ಕೇತನಾ ಅವರಿಗೆ ಇಂಡಿಯನ್ ಇಂಟರ್​ನ್ಯಾಷನಲ್ ಶಾರ್ಟ್ ಫಿಲಂ ಫೆಸ್ಟಿವಲ್​ನಲ್ಲಿ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಸಿಕ್ಕಿದೆ. ವಿಶೇಷ ಸಂದೇಶವಿರುವ ಈ ಚಿತ್ರಕ್ಕೆ ಭುವನ್ ರೆಡ್ಡಿ ಅವರ ಛಾಯಾಗ್ರಹಣ ಮತ್ತು ಹರ್ಷವರ್ಧನ್ ರಾಜ್ ಅವರ ಸಂಗೀತವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net