

ಬೆಂಗಳೂರು: ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ಮದುವೆ ಮಾಡಿಸುತ್ತಾರೆ. ಆದರೆ, ಬೆಳದು ನಿಂತ ಮಗನೇ ಅಪ್ಪನಿಗೆ ಮದುವೆ ಮಾಡಿಸಿದರೆ ಹೇಗೆ? ಇಂಥದ್ದೊಂದು ಕಥೆ ಇಟ್ಟುಕೊಂಡು ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಪುತ್ರ ಶ್ರೀಕಾಂತ್ ಹೊನ್ನವಳ್ಳಿ. ಅವರು ’ಅಪ್ಪ ಇಸ್ ಗ್ರೇಟ್’ ಎಂಬ ಚಿತ್ರ ನಿರ್ದೇಶಿಸುತ್ತಿದ್ದು, ಆ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದೆ.
ಸುರೇಶ್ ಪ್ರೊಡಕ್ಷನ್ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ’ಅಪ್ಪ ಇಸ್ ಗ್ರೇಟ್’ ಚಿತ್ರದ ಮುಹೂರ್ತ ಸಮಾರಂಭವು ಬಾಪೂಜಿನಗರದ ಬೀರೇಶ್ವರ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ಜಿ.ರಾಜಶೇಖರ್ ಕಥೆ, ಸಂಭಾಷಣೆ ಬರೆದು ಬಂಡವಾಳ ಹೂಡುತ್ತಿದ್ದಾರೆ.
ಈ ಚಿತ್ರದಲ್ಲಿ ಅಪ್ಪನಾಗಿ ಶೋಭರಾಜ್ ನಟಿಸಿದರೆ, ಅವರಿಗೆ ಮಗನಾಗಿ 'ಮಜಾಭಾರತ' ಖ್ಯಾತಿಯ ಜ್ಯೂ.ದರ್ಶನ್ ಎಂದೇ ಗುರುತಿಸಿಕೊಂಡಿರುವ ಅವಿನಾಶ್ ಅಭಿನಯಿಸುತ್ತಿದ್ದಾರೆ. ಮಂಡ್ಯ ಮೂಲದ ಪ್ರೇರಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ಮೀಸೆ ಆಂಜನಪ್ಪ, ಹೊನ್ನವಳ್ಳಿ ಕೃಷ್ಣ, ರಾಧಿಕಾ, ಸೌಮ್ಯಾ, ಶಿಲ್ಪ, ಕವನ, ಚಂದ್ರಪ್ರಭಾ ಮುಂತಾದವರು ನಟಿಸುತ್ತಿದ್ದಾರೆ.
ಶಿವಲಿಂಗೇಗೌಡ ಮೂರು ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಮುರಳಿಧರ ಸಂಗೀತ ಸಂಯೋಜಿಸುತ್ತಿದ್ದಾರೆ. ವಿನಸ್ ನಾಗರಾಜ್ ಛಾಯಾಗ್ರಹಣವಿರುವ ಈ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ಕಾರವಾರ ಮುಂತಾದ ಕಡೆ ನಡೆಸಲು ಉದ್ದೇಶಿಸಲಾಗಿದೆ.