ಅಯ್ಯಯ್ಯೋ ಅನ್ಯಾಯ! ನಟ ಶರತ್​ಕುಮಾರ್​ ವಿರುದ್ಧ ಸಿಡಿದೆದ್ದ ನಟ ಧನುಷ್​ ತಾಯಿ, ಚಾಟಿ ಬೀಸಿದ ಹೈಕೋರ್ಟ್​

Dhanush
Published on

ಚೆನ್ನೈ: ಅಪಾರ್ಟ್‌ಮೆಂಟ್‌ನಲ್ಲಿರುವ ಕಾಮನ್​ ಏರಿಯಾವನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ನಟ ಧನುಷ್ ಅವರ ತಾಯಿ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಚೆನ್ನೈ ಕಾರ್ಪೊರೇಷನ್ ಹಾಗೂ ನಟ ಶರತ್‌ಕುಮಾರ್ ಸೇರಿದಂತೆ ಇತರರಿಗೆ ಮದ್ರಾಸ್​ ಹೈಕೋರ್ಟ್ ಆದೇಶಿಸಿದೆ.

ನಟ ಧನುಷ್ ಅವರ ತಾಯಿ ವಿಜಯಲಕ್ಷ್ಮಿ ಚೆನ್ನೈನ ಟಿ. ನಗರದ ರಾಜಮನ್ನಾರ್ ಸ್ಟ್ರೀಟ್‌ನಲ್ಲಿರುವ ಗೋಲ್ಡನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ. ಇದೇ ಅಪಾರ್ಟ್​ಮೆಂಟ್​ನಲ್ಲಿ ವಾಸವಿರುವ ತಿರುನಾವುಕರಸು ಹಾಗೂ ನುಶ್ರತ್ ಅಬಿತಾ ಜತೆ ಸೇರಿ ಆಲ್​ ಇಂಡಿಯಾ ಈಕ್ವಲ್​ ಪೀಪಲ್ಸ್​ ಪಾರ್ಟಿ ಲೀಡರ್​ ಹಾಗೂ ಖ್ಯಾತ ನಟ ಶರತ್​ಕುಮಾರ್​ ವಿರುದ್ಧ ದೂರು ದಾಖಲಿಸಿದ್ದಾರೆ.

ಸೂಕ್ತ ಅನುಮತಿಯೊಂದಿಗೆ ನಿರ್ಮಿಸಲಾದ ಅಪಾರ್ಟ್‌ಮೆಂಟ್‌ನ ಟೆರೆಸ್​ನಲ್ಲಿರುವ ಕಾಮನ್​ ಏರಿಯಾಯನ್ನು ಇತರರಿಗೆ ಬಳಸದಂತೆ ಶರತ್​ ಕುಮಾರ್​ ತಡೆಯುತ್ತಿದ್ದಾರೆ. ನೆಲಮಹಡಿಯಲ್ಲಿ ವಾಸವಿರುವ ಶರತ್‌ಕುಮಾರ್ ಕಾಮನ್​ ಏರಿಯಾವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ವೈಯಕ್ತಿಕ ಮತ್ತು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಧನುಷ್​ ಅವರ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಕುರಿತು ಚೆನ್ನೈ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರು ಸಹ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮದ್ರಾಸ್​ ಹೈಕೋರ್ಟ್​ ನ್ಯಾಯಾಧೀಶರಾದ ಸುಂದರ್ ಮತ್ತು ಸೆಂಥಿಲ್‌ಕುಮಾರ್ ಈ ಪ್ರಕರಣದ ವಿಚಾರಣೆ ನಡೆಸಿದರು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಕಾಜ ಮೊಯ್ದೀನ್ ಕಿಸ್ತಿ, ನಡ ಶರತ್​ಕುಮಾರ್​ ಅವರು ಕಾಮನ್​ ಏರಿಯಾವನ್ನು ಬಳಸದಂತೆ ತಡೆಯಬೇಕು ಮತ್ತು ಈ ವಿಚಾರದಲ್ಲಿ ಸೂಕ್ತ ಆದೇಶ ನೀಡಬೇಕು ಎಂದು ಮನವಿ ಮಾಡಿದರು. ಬಳಿಕ ಚೆನ್ನೈ ಕಾರ್ಪೊರೇಷನ್, ನಟ ಶರತ್​ಕುಮಾರ್​ ಮತ್ತಿತರರಿಗೆ ಪ್ರತಿಕ್ರಿಯೆ ನೀಡುವಂತೆ ಆದೇಶಿಸಿದ ನ್ಯಾಯಾಲಯ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net