'ನನ್ನ ವಾಲೆಂಟೈನ್ - ಪ್ರತಿದಿನ, ಎಂದೆಂದಿಗೂ' ಎಂದು ಸನ್​ಸೆಟ್​ ಫೋಟೋ ಹಾಕಿದ ಅನುಷ್ಕಾ

virushka
Published on

ಮುಂಬೈ: ಎಷ್ಟೋ ಯುವಜನರಿಗೆ ಪ್ರೀತಿಯ ಪ್ರೇರಣೆ ನೀಡೋದೇ ಸಿನಿಮಾಗಳು. ಇನ್ನು ಅಂಥ ಸಿನಿಮೀಯ ಮಾದರಿ ಜೋಡಿ ನಿಜಜೀವನದಲ್ಲೇ ನೋಡಲು ಸಿಕ್ಕರೆ ಯುವಹೃದಯಗಳು ಸಲಾಮು ಹೊಡೆಯೋದು ಗ್ಯಾರಂಟಿ. ಹೀಗೆ ಜನಪ್ರಿಯವಾಗಿರುವ ಸೆಲಿಬ್ರಿಟಿ ಜೋಡಿ - ವಿರುಷ್ಕಾ ದಂಪತಿಯ - ವಿಶೇಷ ಚಿತ್ರವೊಂದು ಪ್ರೇಮಿಗಳ ದಿನದ ಕಳೆ ಹೆಚ್ಚಿಸಿದೆ.

ಹಾಲಿಯಾಗಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮುಂಬೈನಲ್ಲಿ ತಮ್ಮ ನವಜಾತ ಶಿಶುವಿನ ಆರೈಕೆಯಲ್ಲಿ ತೊಡಗಿದ್ದರೆ, ಪತಿ ವಿರಾಟ್ ಕೊಹ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಕ್ರಿಕೆಟ್ ಆಡುತ್ತಿದ್ದಾರೆ. ಹಾಗಂತ ವಾಲೆಂಟೈನ್ಸ್ ಡೇ ಅನ್ನು ಸೆಲಿಬ್ರೇಟ್ ಮಾಡೋದನ್ನು ಅನುಷ್ಕಾ ಮರೆತಿಲ್ಲ. ಕೊಹ್ಲಿಯೊಂದಿಗೆ ಸನ್​ಸೆಟ್​ನಲ್ಲಿ ಪೋಸ್ ನೀಡಿದ ಹಳೆಯದೊಂದು ರೊಮಾಂಟಿಕ್ ಫೋಟೋನ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ಈ ಫೋಟೋ ಜೊತೆಗೆ, "ವಾಲೆಂಟೈನ್ಸ್ ಡೇ ಆಚರಿಸುವ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲ. ಆದರೆ ಇವತ್ತು ಪೋಸ್ಡ್ ಸನ್​ಸೆಟ್ ಫೋಟೋಗಳನ್ನು ಪೋಸ್ಟ್​ ಮಾಡೋಕೆ ಸರ್ವೋತ್ಕೃಷ್ಟ ದಿನ ಅನ್ನಿಸಿತು. ನನ್ನ ವಾಲೆಂಟೈನ್ - ಪ್ರತಿದಿನ, ಎಂದೆಂದಿಗೂ ಮತ್ತು ಇನ್ನೂ ಆಚೆಗೆ" ಎಂದು ಅನುಷ್ಕಾ ಬರೆದಿದ್ದಾರೆ. ಕಪ್ಪು ಟೀಶರ್ಟ್ ತೊಟ್ಟಿರುವ ವಿರಾಟ್, ಬಿಳಿ ಡ್ರೆಸ್ ಹಾಕಿರುವ ಅನುಷ್ಕಾರೊಂದಿಗೆ ನಿಂತಿರುವ ಈ ಚಿತ್ರದ ಹಿನ್ನೆಲೆಯಲ್ಲಿ ಮುಳುಗುತ್ತಿರುವ ಸೂರ್ಯ ಮತ್ತು ಸಮುದ್ರವನ್ನು ಕಾಣಬಹುದು.

ಶೇರ್ ಮಾಡಿದ ನಾಲ್ಕೇ ಗಂಟೆಗಳಲ್ಲಿ 24 ಲಕ್ಷ ಲೈಕ್​ಗಳನ್ನು ಪಡೆದಿರುವ ಈ ಪೋಸ್ಟ್​ಗೆ ಸಾವಿರಾರು ಅಭಿಮಾನಿಗಳು ಕಾಮೆಂಟುಗಳ ಸುರಿಮಳೆಗೈದಿದ್ದಾರೆ. ಒಬ್ಬ ಅಭಿಮಾನಿ "ನನ್ನ ನೆಚ್ಚಿನ ಜೋಡಿ" ಎಂದು ಬರೆದಿದ್ದರೆ, ಮತ್ತೊಬ್ಬರು "ಜಗತ್ತಿನ ಅತಿ ಸುಂದರ ಜೋಡಿ" ಎಂದು ಬಣ್ಣಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net