

‘ಘರ್ಷಣಂ’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ನಟಿ ಅನುಷಾ ರೈ, ನಂತರ ‘ಅಣ್ಣಯ್ಯ’, ‘ರಾಧಾ ಕಲ್ಯಾಣ’ ಮತ್ತು ‘ನಾಗ ಕನ್ನಿಕೆ’ ಧಾರಾವಾಹಿಗಳಲ್ಲೂ ನಟಿಸಿದ್ದರು. ಈಗ ಅನುಷಾ ಸಾಲುಸಾಲು ಕನ್ನಡ ಚಿತ್ರಗಳಲ್ಲಿ ಬಿಜಿಯಾಗಿರುವುದಷ್ಟೇ ಅಲ್ಲ, ಪಕ್ಕದ ತೆಲುಗು ಚಿತ್ರರಂಗಕ್ಕೂ ಹಾರಿದ್ದಾರೆ.
ಹೌದು, ತುಮಕೂರು ಮೂಲದ ಅನುಷಾ ರೈ ಎಂಜಿನಿಯರಿಂಗ್ ಪದವೀಧರೆ. ಅಚಾನಕ್ಕಾಗಿ ಚಿತ್ರರಂಗಕ್ಕೆ ಬಂದರೂ ಇಂದು ಅರ್ಧ ಡಜನ್ಗೂ ಹೆಚ್ಚು ಚಿತ್ರಗಳಲ್ಲಿ ಬಿಜಿ. ‘ಖಡಕ್’, ‘ದಿ ವೈರಸ್’, ‘ಬೆಂಗಳೂರು ಇನ್’, ‘ಧೈರ್ಯಂ ಸರ್ವತ್ರ ಸಾಧನಂ’, ‘ಪೆಂಟಗನ್’, ‘ವೀರಪುತ್ರ’ ಚಿತ್ರಗಳಲ್ಲಿ ನಾಯಕಿಯಾಗಿದ್ದು, ‘ಅಬ್ಬಬ್ಬ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅನುಷಾ ರೈ.
ತಮ್ಮ ಚಿತ್ರಗಳು ಹಾಗೂ ಪಾತ್ರಗಳ ಬಗ್ಗೆ ಹೇಳಿಕೊಳ್ಳುವ ಅವರು, ‘ಧರ್ಮ ಕೀರ್ತಿರಾಜ್ ನಾಯಕನಾಗಿರುವ ಆಕ್ಷನ್ ಎಂಟರ್ಟೈನರ್ ‘ಖಡಕ್’ ಇದೇ ಶುಕ್ರವಾರ ತೆರೆಗೆ ಬರಲಿದೆ. ಮೆಡಿಕಲ್ ಮಾಫಿಯಾ ಸುತ್ತ ಸುತ್ತುವ ‘ದಿ ವೈರಸ್’ ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಮತ್ತು ಪ್ರಿಯಾಂಕಾ ಉಪೇಂದ್ರ ಅವರ ಜತೆ ನಟಿಸುತ್ತಿದ್ದೇನೆ. ಹಾಗೆಯೇ, ‘ಬೆಂಗಳೂರು ಇನ್’ ಚಿತ್ರದಲ್ಲೂ ಧರ್ಮ ಅವರೇ ನಾಯಕ’ ಎನ್ನುತ್ತಾರೆ. ಮೊದಲ ತೆಲುಗು ಚಿತ್ರದ ಕುರಿತು ಮಾತನಾಡುವ ಅವರು, ‘ತೆಲುಗು ಸಿನಿಮಾದ ಮುಹೂರ್ತ ನೆರವೇರಿದ್ದು, ಇದೇ ತಿಂಗಳ 20ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಇದಲ್ಲದೇ ಇನ್ನೂ 3 ತೆಲುಗು ಚಿತ್ರಗಳ ಚರ್ಚೆ ನಡೆಯುತ್ತಿದೆ’ ಎನ್ನುತ್ತಾರೆ.