ರಿಷಭ್​ಗೆ ಎಚ್ಚರಿಕೆ ನೀಡಿದ ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​; ಯಾಕೆ ಗೊತ್ತಾ?

Anurag Kashyap - Rishab Shetty
Published on

ಮುಂಬೈ: ಬಾಲಿವುಡ್​ನ ವಿವಾದಾತ್ಮಕ ನಿರ್ದೇಶಕ ಅನುರಾಗ್​ ಕಶ್ಯಪ್​, ಕನ್ನಡದ ರಿಷಭ್​ ಶೆಟ್ಟಿಗೆ ಎಚ್ಚರಿಗೆ ನೀಡಿದ್ದಾರೆ. ಇಷ್ಟು ಮಾತ್ರ ಕೇಳಿ ಏನೇನೋ ಅಭಿಪ್ರಾಯಕ್ಕೆ ಬರಬೇಡಿ. ಅನುರಾಗ್​ ಮಾತನಾಡಿದ್ದರಲ್ಲೂ ಒಂದು ಅರ್ಥವಿದೆ. ರಿಷಭ್​ ಶೆಟ್ಟಿ ಅವರನ್ನು ಎಚ್ಚರಿಸಿದ್ದಕ್ಕೂ ಒಂದು ಕಾರಣವಿದೆ.

ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾತನಾಡಿರುವ ಅವರು, 'ಇತ್ತೀಚೆಗೆ ದಕ್ಷಿಣದ 'ಕಾಂತಾರ', 'ಪುಷ್ಪ' ಮತ್ತು 'ಕೆಜಿಎಫ್​ 2' ಚಿತ್ರಗಳು ಗೆದ್ದಿವೆ. ಈ ಗೆಲುವಿನಿಂದ ನಿರ್ದೇಶಕರು ಒಂದು ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಅವರು ತಮಗೆ ಸಿಕ್ಕ ಯಶಸ್ಸನ್ನು ಮುಂದೆ ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಯೋಚಿಸಬೇಕು. ಬೇರೆಯವರನ್ನು ಅನುಕರಣೆ ಮಾಡಿದರೆ, ಮುಂದೆ ಬಹಳಷ್ಟು ಕಷ್ಟಪಡಬೇಕಾಗುತ್ತದೆ' ಎಂದು ಹೇಳಿದ್ದಾರೆ.

ಇದಕ್ಕೊಂದು ಉದಾಹರಣೆ ನೀಡಿದ ಅವರು, 'ಕೆಲವು ವರ್ಷಗಳ ಹಿಂದೆ'ಮರಾಠಿಯಲ್ಲಿ 'ಸೈರಾಟ್​' ಎಂಬ ಚಿತ್ರ ಬಿಡುಗಡೆಯಾಯಿತು. ಈ ಚಿತ್ರ ಸೂಪರ್​ ಹಿಟ್​ ಆಗಿದ್ದಷ್ಟೇ ಅಲ್ಲ, ಹೊರಗೆ ದೊಡ್ಡ ಮಾರುಕಟ್ಟೆ ಇದೆ ಎಂದು ಹಲವರಿಗೆ ಮನವರಿಕೆಯಾಯಿತು. ಅದಾಗುತ್ತಿದ್ದಂತೆಯೇ ಎಲ್ಲರೂ ತಮ್ಮ ತನ ಮರೆತು, ಬೇರೆ ತರಹ ಸಿನಿಮಾ ಮಾಡುವುದಕ್ಕೆ ಹೊರಟರು. ಎಲ್ಲರೂ 'ಸೈರಾಟ್​' ಚಿತ್ರವನ್ನೇ ಅನುಕರಣೆ ಮಾಡುವುದಕ್ಕೆ ನಿಂತರು. ಇದರಿಂದ ಮರಾಠಿ ಚಿತ್ರರಂಗಕ್ಕೆ ಸಮಸ್ಯೆ ಆಯಿತು. ಈಗಾಗುತ್ತಿರುವುದು ಸಹ ಅದೇ. ಪ್ಯಾನ್​ ಇಂಡಿಯಾ ಟ್ರೆಂಡ್​ನಿಂದಾಗಿ, ಎಲ್ಲರೂ ಪ್ಯಾನ್​ ಇಂಡಿಯಾ ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ಇದರಲ್ಲಿ ಗೆಲ್ಲುವವರು ಕೆಲವರು ಮಾತ್ರ. ಹಾಗಂತ ಎಲ್ಲರೂ ಅದನ್ನೇ ಮಾಡುವುದಕ್ಕೆ ಹೊರಟರೆ, ದುರಂತವಾಗುತ್ತದೆ. ಬಾಲಿವುಡ್​ನಲ್ಲೂ ಇದೇ ತರಹ ಆಯಿತು. ಹಾಗಾಗಿ, ಒಂದು ಕಥೆಗೆ ಏನು ಸಾಮರ್ಥ್ಯವಿದೆಯೋ ಅಷ್ಟನ್ನು ಮಾತ್ರ ಮಾಡಬೇಕು. ಕಥೆ ಮತ್ತು ಬಜೆಟ್​ ಚಿಕ್ಕದಾಗಿದ್ದರೂ ಪ್ಯಾನ್​ ಇಂಡಿಯಾ ಎಂದು ಹಿಗ್ಗಿಸುತ್ತಾ ಹೋದರೆ ಎಲ್ಲರಿಗೂ ಸೋಲಾಗುತ್ತದೆ' ಎಂದಿದ್ದಾರೆ ಅನುರಾಗ್​ ಕಶ್ಯಪ್​.

'ಒಂದು ಪಕ್ಷ ರಿಷಭ್​ ಶೆಟ್ಟಿ ತಮ್ಮ ಸ್ಟೈಲ್​ ಬದಲಾಯಿಸಿ ದೊಡ್ಡ ಬಜೆಟ್​ ಸಿನಿಮಾಗಳನ್ನು ಮಾಡುವುದಕ್ಕೆ ಹೊರಟರೆ, ಬಾಕ್ಸ್​-ಆಫೀಸ್​ ಗಮನದಲ್ಲಿಟ್ಟುಕೊಂಡು ಚಿತ್ರಗಳನ್ನು ಮಾಡಿದರೆ ... ಆಗ ಸಮಸ್ಯೆಯಾಗುತ್ತದೆ. ಮುಖ್ಯವಾಗಿ ಇಲ್ಲಿ ಪ್ರಾಮಾಣಿಕವಾಗಿರಬೇಕು. ಕಥೆಯ ಅಗತ್ಯತೆಗೆ ತಕ್ಕ ಹಾಗೆ ಚಿತ್ರ ನಿರ್ಮಿಸಬೇಕು. ಅದನ್ನು ಅನಗತ್ಯವಾಗಿ ಹಿಗ್ಗಿಸಿ ದೊಡ್ಡದು ಮಾಡಿದರೆ, ಆಗ ನಷ್ಟ ಗ್ಯಾರಂಟಿ' ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net