

ಬೆಂಗಳೂರು: ‘ಒಂದೇ ಜಾನರ್‌ಗೆ ಸೀಮಿತವಾಗಬಾರದು ಅಂತ ಈ ಪ್ರಯತ್ನ ಮಾಡ್ತಿದ್ದೀನಿ ...’ ಹಾಗೆನ್ನುತ್ತಾರೆ ಸುಜಯ್ ಶಾಸ್ತ್ರಿ. ಅವರು ಕಾಮಿಡಿ ಪಾತ್ರಗಳಿಗೆ ಜನಪ್ರಿಯರಷ್ಟೇ ಅಲ್ಲ, ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಎಂಬ ಕಾಮಿಡಿ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ಇದೀಗ ಅವರು ತಮ್ಮ ಎಂದಿನ ಹಾದಿ ಬಿಟ್ಟು, ವಿಭಿನ್ನ ಪ್ರಯತ್ನ ಮಾಡುತ್ತಿದ್ದಾರೆ. ‘ಚಾರ್ಲಿ ಆಲ್ಫಾ ಟ್ಯಾಂಗೋ’ ಎಂಬ ಥ್ರಿಲ್ಲರ್ ಚಿತ್ರವನ್ನು ನಿರ್ದೇಶಿಸುವುದಕ್ಕೆ ಹೊರಟಿದ್ದಾರೆ.
ಈ ಚಾರ್ಲಿ, ಆಲ್ಫಾ, ಟ್ಯಾಂಗೋ ಎಂಬುದೆಲ್ಲಾ ಪೊಲೀಸ್ ವಿಭಾಗದಲ್ಲಿ ಬಳಸಲಾಗುವ ಕೆಲವು ಕೋಡ್‌ವರ್ಡ್‌ಗಳು. ಚಿತ್ರಕ್ಕೂ ಅದೇ ಹೆಸರಿಡಲಾಗಿದೆಯೆಂದರೆ, ಈ ಕಥೆ ಪೊಲೀಸ್ ವ್ಯವಸ್ಥೆಯ ಕುರಿತಾಗಿದ್ದಿರಬಹುದು ಎಂಬ ಸಂಶಯ ಸಹಜವಾಗಿಯೇ ಬರಬಹುದು.
ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಸುಜಯ್, ‘ಎಲ್ಲಾ ರಂಗಗಳಲ್ಲೂ ಕೆಲವು ವಿಷಯಗಳನ್ನು ಮಾತನಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಕೆಲವು ಒತ್ತಡಗಳಿಂದ ಹೇಳುವುದನ್ನು ಪೂರ್ತಿ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಅಂಥದ್ದೊಂದು ವಿಷಯವನ್ನಿಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇವೆ. ಇದು ನೈಜ ಘಟನೆ ಆಧಾರಿತ ಚಿತ್ರ ಎನ್ನುವುದಕ್ಕಿಂತ, ಕೆಲವು ವರದಿ ಮತ್ತು ವಿಷಯಗಳನ್ನಿಟ್ಟುಕೊಂಡು ಮಾಡಿದ ಕಥೆ. ಇದೊಂದು ಪಕ್ಕಾ ಕ್ರೈಮ್ ಥ್ರಿಲ್ಲರ್ ಚಿತ್ರವಾಗಲಿದೆ’ ಎನ್ನುತ್ತಾರೆ ಸುಜಯ್.
ಈ ಹಿಂದೆ ‘ಬೆಲ್ ಬಾಟಮ್’ ಮತ್ತು ಇದೀಗ ‘ಆ್ಯಕ್ಟ್ 1978’ಗೆ ಬರೆದಿರುವ ಟಿ.ಕೆ. ದಯಾನಂದ್, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿನ ಒಂದು ಪ್ರಮುಖ ಪಾತ್ರದಲ್ಲಿ ನಟಿಸುವುದಕ್ಕೆ ‘ಆ ಕರಾಳ ರಾತ್ರಿ’ಯ ಅನುಪಮಾ ಗೌಡ ಅವರನ್ನು ಕೇಳಲಾಗಿದೆಯಂತೆ.
ಇನ್ನೊಂದು ಪಾತ್ರಕ್ಕೆ ಕಿಶೋರ್ ಅವರನ್ನು ಸಂಪರ್ಕಿಸುವುದಕ್ಕೆ ಚಿತ್ರತಂಡ ಯೋಚಿಸಿದೆ. ಸದ್ಯಕ್ಕೆ ಚಿತ್ರದ ಒಂದು ಪೋಸ್ಟರ್ ಬಿಡುಗಡೆಯಾಗಿದ್ದು, ಡಿಸೆಂಬರ್‌ನಲ್ಲಿ ಚಿತ್ರ ಪ್ರಾರಂಭವಾಗಲಿದೆ.